ಬೆಂಗಳೂರು: ಎಷ್ಟೇ ಕಷ್ಟ ಆದ್ರೂ, ಸಾಲ ಮಾಡಿ ಆದ್ರೂ ನೀರಾವರಿ ಯೋಜನೆ ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದು, ಇಲಾಖೆಯಲ್ಲಿ ಯಾವ ಯೋಜನೆಯೂ ಸ್ಥಗಿತ ಆಗೋದಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಕಳೆದ ಮೂರು ದಿನಗಳಿಂದ ನೀರಾವರಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆರ್ಥಿಕ ಸಂಕಷ್ಟ ಇದೆ ಎಂಬುದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಸಿಎಂ ದೆಹಲಿಗೆ ಹೋಗಲು ದಿನಾಂಕ ಫಿಕ್ಸ್ ಮಾಡ್ತಾರೆ. ಜಿಎಸ್ಟಿ ಹಣ ಕೇಂದ್ರದಿಂದ ಆದಷ್ಟು ಬೇಗ ಬಿಡುಗಡೆ ಆಗಲಿದೆ. ಈ ಸಂಬಂಧ ಸಿಎಂ ಮೊನ್ನೆ ಮೀಟಿಂಗ್ ಮಾಡಿದ್ದಾರೆ. ಎಲ್ಲಾ ಯೋಜನೆಗಳಿಗೆ ಸುಮಾರು 1.10 ಲಕ್ಷ ಕೋಟಿ ರೂ. ಅನುದಾನ ಬೇಕು ಎಂದು ಇದೇ ವೇಳೆ ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗಾಗಿನ ಭೂಸ್ವಾಧೀನಕ್ಕೆ ದರ ನಿಗದಿ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ನಾಳೆ ಮೇಕೆದಾಟುಗೆ ಹೋಗ್ತೇನೆ. ಖುದ್ದು ನಾನೇ ಸ್ಥಳ ಪರಿಶೀಲಿಸುತ್ತೇನೆ ಮತ್ತೆ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಯೋಜನೆಗೆ ಅನುಮತಿಗೆ ಮನವಿ ಮಾಡುತ್ತೇನೆ ಎಂದರು.
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಗ್ರಾಮಗಳು ಮುಳುಗಡೆಯಾಗುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ತಾಂತ್ರಿಕ ಸಮಿತಿ ರಚಿಸಿದ್ದು, ಜಲಾಶಯದ ಎತ್ತರ ಹೆಚ್ಚಳ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ವಿವರಿಸಿದರು.
ಸಭೆಯಲ್ಲಿ ಚರ್ಚಿಸಲಾದ ಅಂಶಗಳು:
- ವಿಶ್ವ ಬ್ಯಾಂಕ್ ನೆರವಿನ DRIP-II & III ಅಡಿಯಲ್ಲಿ ರೂ. 1500.00 ಕೋಟಿ ಮೊತ್ತದ 52 ಸಂಖ್ಯೆಯ ರಾಜ್ಯದ ಆಣೆಕಟ್ಟುಗಳ ಪುನಶ್ಚೇತನ ಹಾಗೂ ಅಭಿವೃದ್ಧಿ ಯೋಜನೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ರಾಜ್ಯಕ್ಕೆ ರೂ.750.00 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಹಣಕಾಸು ಇಲಾಖೆ ಸಹಮತಿ ಪಡೆದು ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮ.
- ರಾಜ್ಯದ ವಿವಿಧ ಅಚ್ಚುಕಟ್ಟು ಪ್ರದೇಶಗಳಲ್ಲಿ ದುಸ್ಥಿತಿಯಲ್ಲಿರುವ ರಸ್ತೆಗಳನ್ನು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ಮುಖಾಂತರ ನಿಗಮಗಳ ಅನುದಾನದೊಂದಿಗೆ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಮತ್ತು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಗಳಿಗೆ ಅಗತ್ಯ ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳನ್ನು ಒದಗಿಸಿ ಇವುಗಳ ಬಲವರ್ಧನೆಗೆ ಕ್ರಮ.
- ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ನೀರಾವರಿ ಯೋಜನೆಗಳಿಂದ 1 ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ
- ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನ ಪಡಿಸಿಕೊಳ್ಳುವ ಜಮೀನುಗಳ ರೈತರಿಗೆ ಶೀಘ್ರವಾಗಿ ಪರಿಹಾರ ಧನವನ್ನು ತಲುಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಇಲಾಖೆ 4 ನಿಗಮಗಳಲ್ಲಿ ಭೂಸ್ವಾಧೀನ ಕ್ಕಾಗಿ ಪ್ರತ್ಯೇಕ ಲೆಕ್ಕ ಶೀರ್ಷಿಕೆ ಯೊಂದಿಗೆ ಅನುದಾನ ಹಂಚಿಕೆ ಮಾಡಿ ಮೀಸಲಿಡಲು ತೀರ್ಮಾನ.
- ಜಲಸಂಪನ್ಮೂಲ ಇಲಾಖೆಗೆ ಪ್ರತಿ ವರ್ಷ ಆಯವ್ಯಯದಲ್ಲಿ ಒದಗಿಸಲಾಗುವ ಅನುದಾನವನ್ನು ನೀರಾವರಿಯೇತರ ಕಾಮಗಾರಿಗಳಿಗೆ ಬಳಸಿಕೊಳ್ಳುವುದನ್ನು ನಿರ್ಬಂಧಿಸಿ ನೀರಾವರಿ ಸೃಜಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಲು ಕ್ರಮ.
- ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆ 61 ಕಿ.ಮೀ. ವರೆಗಿನ ಮತ್ತು ಹೊಳಲ್ಕೆರೆ ಫೀಡರ್ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ 48 ಕೆರೆಗಳನ್ನು ತುಂಬಿಸಲು ಹಾಗೂ ತರೀಕೆರೆ ಏತ ನೀರಾವರಿ ಯೋಜನೆಯಡಿ 10,000 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಕಲ್ಪಿಸಲು ಯೋಜನೆ.
- ಎತ್ತಿನಹೊಳೆ ಯೋಜನೆಯಡಿ ಲಿಫ್ಟ್ ಕಾಂಪೊನೆಂಟ್ ಮತ್ತು ಗುರುತ್ವ ಕಾಲುವೆಯ 31 ಕಿ.ಮೀ.ವರೆಗಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ 2021 ಮುಂಗಾರು ಹಂಗಾಮಿನಲ್ಲಿ ವೇದಾ ವ್ಯಾಲಿಗೆ ಪ್ರಾಯೋಗಿಕವಾಗಿ ನೀರು ಹರಿಸಲು ಅಗತ್ಯ ಕ್ರಮ.