ಬೆಂಗಳೂರು: ವೀರ ಸಾವರ್ಕರ್ ಫೋಟೋವನ್ನು ಮುಸ್ಲಿಮರ ಏರಿಯಾದಲ್ಲಿ ಹಾಕಿಸಿದ್ಯಾಕೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ. ಮುಸ್ಲಿಮರು ಇರುವ ಮಾತ್ರಕ್ಕೆ ಅದನ್ನು ಪಾಕಿಸ್ತಾನ ಅಂದುಕೊಂಡಿದ್ದಾರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಗೊಂದಲದಲ್ಲಿದ್ದಾರೆ. ಸಾವರ್ಕರ್ ಫೋಟೋ ಮುಸ್ಲಿಂ ಸಮುದಾಯ ಇರುವ ಕಡೆ ಹಾಕಿದ್ದನ್ನು ಪ್ರಶ್ನಿಸಿದ್ದಾರೆ. ಮುಸ್ಲಿಂ ಏರಿಯಾ ಅಂದರೆ ಅದು ಪಾಕಿಸ್ತಾನಕ್ಕೆ ಸೇರಿದ್ಯಾ? ಮುಸ್ಲಿಮರು ಇರೋ ಮಾತ್ರಕ್ಕೆ ಅದನ್ನು ಪಾಕಿಸ್ತಾನ ಅಂದುಕೊಂಡಿದ್ದಾರಾ ಸಿದ್ದರಾಮಯ್ಯ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಾವರ್ಕರ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರು. ಎರಡು ಬಾರಿ ಕರಿನೀರಿನ ಶಿಕ್ಷೆಗೆ ಒಳಗಾದವರು. ಅಂಡಮಾನ್ ಜೈಲಿನಲ್ಲಿದ್ದವರು ಯಾರೂ ಬದುಕಿ ಬಂದಿಲ್ಲ. ಒಂದೋ ಖಾಯಿಲೆಯಿಂದ ಸಾಯ್ತಾರೆ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ತಾರೆ. ಅಂತಹ ಶಿಕ್ಷೆಯನ್ನು ಸಾವರ್ಕರ್ ಅನುಭವಿಸಿದ್ದಾರೆ. ಇವರ ಲೀಡರ್‌ಗಳಿಗೆ ಅಂತ ಶಿಕ್ಷೆ ಯಾಕೆ ಕೊಟ್ಟಿಲ್ಲ?
ಸಿಎಂ ಜೊತೆ ಚರ್ಚೆ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ಕೋರಿ ಮನವಿ ಬಂದಿದೆ. ಹಬ್ಬ ಆಚರಣೆ ವಿಚಾರವನ್ನು ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಈಗ ಆ ಜಾಗ ಕಂದಾಯ ಇಲಾಖೆಗೆ ಸೇರಿದೆ. ಅಲ್ಲಿ ಏನು ಆಗಬೇಕು ಎಂದು ತೀರ್ಮಾನ ಮಾಡುವ ಅಧಿಕಾರ ಸರ್ಕಾರಕ್ಕಿದೆ ಎಂದರು.
ಇದನ್ನೂ ಓದಿ: ಶಾಸಕ ದೊಡ್ಡನಗೌಡ ಪಾಟೀಲ ಭಾಷಣ ಮಾಡುವಾಗ ಕಲ್ಲೆಸೆದ ಕಿಡಿಗೇಡಿಗಳು