ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರಾದ ಎಂ.ಬಿ ಪಾಟೀಲ್ ಹಾಗೂ ಪ್ರಿಯಾಂಕ ಖರ್ಗೆಗೆ ಹೆಚ್ಚುವರಿ ಖಾತೆ ಹಂಚಿಕೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಪತ್ರದಲ್ಲಿ ಈ ಮಾಹಿತಿಯನ್ನು ಇಂದು ಪ್ರಕಟಿಸಲಾಗಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ಗೆ ಹೆಚ್ಚುವರಿಯಾಗಿ ಮೂಲಸೌಲಭ್ಯ ಅಭಿವೃದ್ಧಿ ಖಾತೆ ಹಂಚಿಕೆ ಮಾಡಿ ಬುಧವಾರ ಅಧಿಸೂಚನೆ ಹೊರಡಿಸಲಾಗಿದೆ.
ಹಾಗೆಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹೆಚ್ಚುವರಿಯಾಗಿ ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಜೈವಿಕ ತಂತ್ರಜ್ಞಾನ (ಬಿಟಿ) ಖಾತೆಯ ಜವಾಬ್ದಾರಿ ವಹಿಸಲಾಗಿದೆ. ಮೂಲಸೌಲಭ್ಯ ಅಭಿವೃದ್ಧಿ ಮತ್ತು ಐಟಿ - ಬಿಟಿ ಖಾತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಹಿಸಿಕೊಂಡಿದ್ದರು. ಪರಿಷ್ಕೃತ ಖಾತೆ ಹಂಚಿಕೆ ಅಧಿಸೂಚನೆ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ, ಸಂಪುಟ ಸಚಿವಾಲಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ ಮತ್ತು ಹಂಚಿಯಾಗದ ಇತರ ಖಾತೆಗಳ ಹೊಣೆ ನಿರ್ವಹಿಸಲಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ವಿಚಾರದಲ್ಲಿ ಅಪಸ್ವರ ಎತ್ತಿದ್ದ ಡಾ. ಜಿ. ಪರಮೇಶ್ವರ್ ಹಾಗೂ ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಯಶಸ್ವಿ ಆಗಿದ್ದರು. ಸಾರಿಗೆ ಇಲಾಖೆ ಬೇಡವೆಂದು ಪಟ್ಟು ಹಿಡಿದು ಕುಳಿತಿದ್ದ ರಾಮಲಿಂಗಾರೆಡ್ಡಿ ಹಾಗೂ ಗೃಹ ಖಾತೆಯನ್ನು ವಹಿಸಿಕೊಳ್ಳಲು ಹಿಂದೇಟು ಹಾಕಿದ್ದ ಜಿ. ಪರಮೇಶ್ವರ್ ಅವರ ಮನವೊಲಿಸಲಾಗಿತ್ತು.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೆಚ್ಚುವರಿ ಹೊರೆ ಆಗಬಹುದಾಗಿದ್ದ ಖಾತೆಯನ್ನು ಇತರ ಮಂತ್ರಿಗಳಿಗೆ ಹಂಚಿಕೆ ಮಾಡಲಾಗಿದೆ. ಸಿದ್ದರಾಮಯ್ಯ 2013 ರಿಂದ 2018ರವರೆಗೆ ಮುಖ್ಯಮಂತ್ರಿ ಆಗಿದ್ದ ಸಂಪುಟದಲ್ಲಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅಂದು ಐಟಿ - ಬಿಟಿ ಖಾತೆಯನ್ನು ನಿಭಾಯಿಸಿದ್ದರು. ಇದೀಗ ಅದೇ ಖಾತೆ ಮತ್ತೊಮ್ಮೆ ಅವರ ಪಾಲಿಗೆ ಒಲಿದು ಬಂದಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯು ಮೇ 27ರಂದು ನಡೆದಿತ್ತು. 24 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಅದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆಗೆ ಮೊದಲ ಹಂತದಲ್ಲಿ 8 ಮಂದಿ ಸಚಿವರಾಗಿ ಪದಗ್ರಹಣ ಮಾಡಿದ್ದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದರು.
ಇದನ್ನೂ ಓದಿ : ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸ್ಪಂದಿಸುವ ಗುಣ ಇಲ್ಲದಿದ್ದರೆ ನ್ಯಾಯ ಒದಗಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ