ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಉತ್ತರ ಕರ್ನಾಟಕ ಜಿಲ್ಲಾ ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದಂತೆ ಸಚಿವಾಕಾಂಕ್ಷಿಗಳು ನಿವಾಸಕ್ಕೆ ಆಗಮಿಸಿ ಒತ್ತಡ ಹೇರಲು ಆರಂಭಿಸಿದ್ದಾರೆ. ಎರಡು ದಿನಗಳ ಉತ್ತರ ಕರ್ನಾಟಕ ಜಿಲ್ಲಾ ಪ್ರವಾಸ ಮುಗಿಸಿ ಬೊಮ್ಮಾಯಿ ಬೆಂಗಳೂರಿನ ನಿವಾಸಕ್ಕೆ ಮರಳಿದ್ಧಾರೆ. ಸಿಎಂ ನಿವಾಸ ತಲುಪಿದ ಮಾಹಿತಿ ಲಭಿಸುತ್ತಿದ್ದಂತೆ ಪ್ರಮುಖ ಸಚಿವ ಆಕಾಂಕ್ಷಿಗಳಾದ ಆರ್. ಶಂಕರ್ ಹಾಗೂ ಮಹೇಶ್ ಪ್ರತ್ಯೇಕವಾಗಿ ಸಿಎಂ ನಿವಾಸಕ್ಕೆ ಆಗಮಿಸಿ ಚರ್ಚಿಸಿದ್ದಾರೆ.
ಸಚಿವ ಸಂಪುಟ ರಚನೆ ಮಾಹಿತಿ ಸಿಗುತ್ತಿದ್ದಂತೆ ಸಿಎಂ ಬೆನ್ನುಬಿದ್ದಿರುವ ಆರ್. ಶಂಕರ್ ಜಿಲ್ಲೆಯಿಂದಲೇ ಸಿಎಂ ಜೊತೆ ವಿಮಾನದಲ್ಲಿ ಆಗಮಿಸುವ ಸಂದರ್ಭ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಗೃಹ ಕಚೇರಿ ಕೃಷ್ಣಗೆ ಆಗಮಿಸಿ ಒತ್ತಡ ಹೇರಿದ್ದರು. ಇದೀಗ ಬೊಮ್ಮಾಯಿ ಅವರ ನಿವಾಸಕ್ಕೆ ಭೇಟಿ ನೀಡಿ ತಮ್ಮ ಬೇಡಿಕೆ ಮುಂದಿಡುವ ಪ್ರಯತ್ನ ಮಾಡಿದ್ದಾರೆ.
ಇವರು ಭೇಟಿಯಾಗಿ ತೆರಳಿದ ಬಳಿಕ ಮಾಜಿ ಸಚಿವ ಹಾಗೂ ಕೊಳ್ಳೆಗಾಲ ಶಾಸಕ ಎನ್. ಮಹೇಶ್ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ. ಬಿಜೆಪಿ ಸೇರುವುದನ್ನು ಬಿಟ್ಟರೆ ನನಗೆ ಬೇರೆ ಆಯ್ಕೆ ಇರಲಿಲ್ಲ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಮಾಡುವ ಕಾರ್ಯದಲ್ಲಿ ನಿರತನಾಗಿದ್ದೇನೆ. ನನಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ನಾಯಕರನ್ನಾಗಲಿ, ರಾಜ್ಯ ನಾಯಕರನ್ನಾಗಲಿ ನಾನು ಕೇಳಿಲ್ಲ. ಇಂದೂ ಸಹ ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ಬಿಜೆಪಿ ಸೇರ್ಪಡೆಯಾಗಿ ನನ್ನ ಕ್ಷೇತ್ರ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿದ್ದೇನೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡುವುದು ಅಥವಾ ಬಿಡುವುದು ಪಕ್ಷದ ನಾಯಕರ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದ್ದಾರೆ.
ಪ್ರವಾಸ ನೀರಸ:
ಕಳೆದ ಎರಡು ದಿನಗಳಿಂದ ಬೆಳಗಾವಿ ಹುಬ್ಬಳ್ಳಿ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಮುಖಂಡರ ಜೊತೆ ಚರ್ಚೆ ನಡೆಸಿ ಬಂದಿದ್ದ ಸಿಎಂಗೆ ಸ್ಥಳೀಯ ನಾಯಕರ ಸಹಕಾರ ಕೂಡ ಕಿರಿಕಿರಿ ಉಂಟು ಮಾಡಿದೆ. ಬೆಳಗಾವಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖಂಡರ ಜತೆ ಚರ್ಚಿಸಲು ಅವರು ತೆರಳಿದ್ದರು. ಆದರೆ ಬೆಳಗಾವಿಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಅಭಯ್ ಪಾಟೀಲ್ ಸಿಎಂ ಕಾರ್ಯದ ಸಭೆಯಲ್ಲಿ ಭಾಗವಹಿಸಲಿಲ್ಲ. ಇನ್ನು ಜಾರಕಿಹೊಳಿ ಸಹೋದರರು ಕೂಡ ಸಭೆಯಿಂದ ಅಂತರ ಕಾಪಾಡಿಕೊಂಡಿದ್ದರು. ಇದೆಲ್ಲ ತಲೆಬಿಸಿಗಳ ನಡುವೆಯೇ ಸಿಎಂಗೆ ಇದೀಗ ಸಚಿವ ಸ್ಥಾನ ಆಕಾಂಕ್ಷಿಗಳ ಒತ್ತಡ ಹೆಚ್ಚಾಗುತ್ತಿದೆ.
ಪುತ್ರಿಗೆ ಅನಾರೋಗ್ಯ:
ಉತ್ತರ ಕರ್ನಾಟಕ ಜಿಲ್ಲಾ ಪ್ರವಾಸ ಮುಗಿಸಿ ವಾಪಸಾದ ಸಿಎಂ ಬಸವರಾಜ್ ಬೊಮ್ಮಾಯಿಗೆ ಮಗಳ ಅನಾರೋಗ್ಯ ಕೂಡ ಪ್ರಮುಖವಾಗಿ ಕಾಡಿದೆ. ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಪುತ್ರಿ ದಾಖಲಾಗಿರುವ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇವರ ಪುತ್ರಿ ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರವಾಸದಲ್ಲಿದ್ದ ಹಿನ್ನೆಲೆ ಸಿಎಂಗೆ ಮಗಳನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಆಸ್ಪತ್ರೆಗೆ ತೆರಳಿ ಪುತ್ರಿ ಆರೋಗ್ಯ ವಿಚಾರಿಸಿ ಬಂದಿದ್ದಾರೆ.
ರಕ್ಷಾಬಂಧನ ಆಚರಣೆ:
ಪ್ರಜಾಪಿತ ಬ್ರಹಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಉಪ ವಲಯ ಸಂಚಾಲಕರಾದ ಬಿ ಕೆ ಲೀಲಾ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಕ್ಷಾ ಬಂಧನ ಹಬ್ಬದ ಅಂಗವಾಗಿ ರಾಖಿ ಕಟ್ಟಿ ಶುಭ ಕೋರಿದರು. ಮುಖ್ಯಮಂತ್ರಿಗಳ ಆರ್.ಟಿ. ನಗರ ನಿವಾಸದಲ್ಲಿ ಲೀಲಾ ಅವರು ಬೊಮ್ಮಾಯಿ ಅವರಿಗೆ ರಾಖಿ ಕಟ್ಟಿದರು. ರಾಖಿ ಕಟ್ಟಿದ್ದಕ್ಕೆ ಮುಖ್ಯಮಂತ್ರಿಗಳು ಈಶ್ವರಿಯ ವಿಶ್ವವಿದ್ಯಾಲಯದ ಬ್ರಹ್ಮ ಕುಮಾರಿಯರಿಗೆ ಧನ್ಯವಾದಗಳನ್ನು ಅರ್ಪಿಸಿದರು..