ಬೆಂಗಳೂರು: ಮೇಜರ್ ಧ್ಯಾನ್ ಚಂದ್ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ. ಯುವ ಕ್ರೀಡಾಪಟುಗಳು ಮೇಜರ್ ಧ್ಯಾನ್ ಚಂದ್ರ ಕೆಚ್ಚು ಬೆಳೆಸಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣ ಗೌಡ ಹೇಳಿದರು.
ಅಕ್ಕಿತಿಮ್ಮಯ್ಯ ರಾಜ್ಯ ಹಾಕಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಾತ್ರಿ ಚಂದ್ರನ ಬೆಳಕಿನಲ್ಲಿಯೂ ಕ್ರೀಡಾಭ್ಯಾಸ ಮಾಡುತ್ತಿದ್ದ ಕಾರಣ ಧ್ಯಾನ್‌ಸಿಂಗ್ ಮುಂದೆ ಧ್ಯಾನ್ 'ಚಂದ್' ಎಂದೇ ಪ್ರಸಿದ್ಧಿಯಾದರು. ಅವರಂತೆ ಪ್ರತಿಯೊಬ್ಬ ಕ್ರೀಡಾಪಟುವು ಶೃದ್ಧೆಯಿಂದ ಕ್ರೀಡಾಭ್ಯಾಸ ಮಾಡಬೇಕು ಎಂದು ಯುವ ಕ್ರೀಡಾಪಟುಗಳಿಗೆ ಸಲಹೆ ನೀಡಿದರು.

ಪ್ರತಿ ತಾಲೂಕಿಗೆ ಕ್ರೀಡಾಂಗಣ ನಿರ್ಮಾಣ
ಕ್ರೀಡೆಗೆ ರಾಜ್ಯ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಖೇಲೊ ಇಂಡಿಯಾ ಕೇಂದ್ರ ಸ್ಥಾಪಿಸುತ್ತಿದ್ದೇವೆ. ಪ್ರತಿ ತಾಲೂಕಿನಲ್ಲೂ ಕ್ರೀಡಾಂಗಣ ನಿರ್ಮಿಸುತ್ತಿದ್ದೇವೆ. ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪಿಸುತ್ತಿದ್ದೇವೆ. ಆ ಮೂಲಕ ಕ್ರೀಡೆಗೆ, ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡುತ್ತಿದ್ದೇವೆ ಎಂದರು.

ಅಮೃತ ಕ್ರೀಡಾ ದತ್ತು ಯೋಜನೆ ಜಾರಿಗೆ
ಮುಂದಿನ ಒಲಿಂಪಿಕ್ಸ್ಗೆ ರಾಜ್ಯದಿಂದ 75 ಕ್ರೀಡಾಪಟುಗಳನ್ನು ಕಳುಹಿಸುವ ಗುರಿ ಹೊಂದಿದ್ದೇವೆ. ಅದಕ್ಕಾಗಿ ಅಮೃತ ಕ್ರೀಡಾ ದತ್ತು ಯೋಜನೆ ಜಾರಿಗೆ ತಂದಿದ್ದೇವೆ. ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರತಿ ದಿನ ಒಂದು ಗಂಟೆ ಕ್ರೀಡೆಗೆ ಮೀಸಲಿಡುವಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರ ಸಹ ಹಿಂದೆಂದೂ ನೀಡದಂತಹ ಪ್ರೋತ್ಸಾಹವನ್ನು ಕ್ರೀಡೆಗೆ ನೀಡುತ್ತಿದೆ. ಕ್ರೀಡಾಪಟುಗಳು ಸತತ ಅಭ್ಯಾಸ ನಡೆಸಿ, ಪದಕ ಗಳಿಸುವತ್ತ ಗಮನಹರಿಸಲಿ. ಎಲ್ಲಾ ರೀತಿಯ ಪ್ರೋತ್ಸಾಹ ಸರ್ಕಾರ ನೀಡುತ್ತದೆ ಎಂದು ಸಚಿವ ಡಾ. ನಾರಾಯಣ ಗೌಡ ಹೇಳಿದರು.

ಕ್ರೀಡಾಕೂಟ ವಿಜೇತರಿಗೆ ಪದಕ ಪ್ರದಾನ
ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ಪ್ರಾಧಿಕಾರ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳು ಆಯೋಜಿಸಿದ ಕ್ರೀಡಾ ದಿನಾಚರಣೆಯಲ್ಲಿ ಕೂಡ ನಾರಾಯಣ ಗೌಡ ಪಾಲ್ಗೊಂಡರು. ವಿವಿಧ ವಯೋಮಾನದವರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಸಚಿವರು ಪದಕ ಪ್ರದಾನ ಮಾಡಿದರು. ಈ ವೇಳೆ ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಾಗಿರುವ ಅಂಕಿತ ಅವರನ್ನು ಸನ್ಮಾನಿಸಲಾಯಿತು.