ಬೆಂಗಳೂರು: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತೆಲಂಗಾಣದಲ್ಲಿನ ಚುನಾವಣಾ ಪ್ರಚಾರದ ವೇಳೆ ಅಲ್ಲಿನ ಜನರು ಕಾಂಗ್ರೆಸ್ ಬಗ್ಗೆ ವಿಶೇಷ ಒಲವು ಹೊಂದಿದ್ದು ಎದ್ದು ಕಾಣುತ್ತಿತ್ತು. ಆ ಒಲವು ಇಂದು ನಮ್ಮ ಪಕ್ಷದ ಗೆಲುವಾಗಿದೆ. ಕಳೆದ 10 ವರ್ಷಗಳಿಂದ ಬಿಆರ್‌ಎಸ್ ಆಡಳಿತದಿಂದ ರೋಸಿಹೋಗಿದ್ದ ಜನರು ಕಾಂಗ್ರೆಸ್ಸಿಗೆ ಗೆಲುವು ತರಲು ಕಾರಣಕರ್ತರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳಷ್ಟೇ ಪಕ್ಷಕ್ಕೆ ಗೆಲುವು ತಂದು ಕೊಟ್ಟಿಲ್ಲ, ಕಳೆದ ಹತ್ತು ವರ್ಷಗಳಿಂದ ತೆಲಂಗಾಣ ರಾಜ್ಯದಲ್ಲಿ ಏನು ಆಗಿದೆ ಎಂದು ನೋಡಿದ್ದೇವೆ. ಹಾಲಿ ಮುಖ್ಯಮಂತ್ರಿ ಕೆಸಿಆರ್ ಜನಸ್ನೇಹಿ ಸರ್ಕಾರ ಆಗಲಿರಲಿಲ್ಲ. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಅಭೂತಪೂರ್ವ ಗೆಲುವು ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಘಟಿತ, ವ್ಯವಸ್ಥಿತ ಚುನಾವಣಾ ಪ್ರಚಾರದಿಂದ ತೆಲಂಗಾಣದಲ್ಲಿ ಅತ್ಯುತ್ತಮ ಫಲಿತಾಂಶ - ಸಚಿವ ಬೋಸರಾಜು: ಮತ್ತೊಂದೆಡೆ, ಸಂಘಟಿತ ಹೋರಾಟ ಮತ್ತು ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳ ಪರಿಣಾಮದಿಂದಾಗಿ ತೆಲಂಗಾಣ ರಾಜ್ಯದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ ಎಂದು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಸಂತಸ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕ ರಾಜ್ಯದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳೂ ಇಡೀ ದೇಶಕ್ಕೆ ಮಾದರಿಯಾಗಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ತೆಲಂಗಾಣ ರಾಜ್ಯದ ಉಸ್ತುವಾರಿ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಆ ವೇಳೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸಂಚರಿಸಿದ್ದೇನೆ. ಇಲ್ಲಿ ಬಿಆರ್‌ಎಸ್, ಬಿಜೆಪಿ ಮತ್ತು ಎಂಐಎಂ ವಿರುದ್ಧ ಜನವಿರೋಧಿ ಅಲೆಯಿತ್ತು ಎಂದರು.
ಕಾಂಗ್ರೆಸ್ ಚುನಾವಣಾ ಯುದ್ಧ ತಂತ್ರದಿಂದ ಸೋತಿದೆ - ವಿಠ್ಠಲ ಕಟಕಧೋಂಡ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಕುರಿತು ವಿಜಯಪುರದಲ್ಲಿ ಕಾಂಗ್ರೆಸ್ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಮೂರು ರಾಜ್ಯಗಳಲ್ಲಿ ಬಿಜೆಪಿ, ಒಂದು ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈಗಾಗಲೇ ಎರಡು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಇತ್ತು. ಮಧ್ಯಪ್ರದೇಶ, ರಾಜಸ್ಥಾನ ಹಿಂದೂ ಬೆಲ್ಟ್ಗಳು. ಆ ಉದ್ದೇಶದಿಂದ ಬಿಜೆಪಿಗೆ ಸ್ವಲ್ಪ ಮುನ್ನಡೆ ಆಗಿರಬಹುದು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನೆಕ್ ಟು ನೆಕ್ ಹೋರಾಟ ಮಾಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ಚುನಾವಣಾ ಯುದ್ಧ ತಂತ್ರದಿಂದ ಸೋತಿದೆ ಎಂದು ಹೇಳಿದರು.
ಇದನ್ನೂ ಓದಿ: ಮತದಾರರ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕು : ಸಚಿವ ಎಂ ಬಿ ಪಾಟೀಲ್