ಬೆಂಗಳೂರು: ತೌಕ್ತೆ ಚಂಡಮಾರುತದಿಂದ ಕರಾವಳಿ ಕರ್ನಾಟಕದಲ್ಲಿ 126 ಕೋಟಿ ರೂ. ನಷ್ಟವಾಗಿದ್ದು, ಪರಿಹಾರಕ್ಕಾಗಿ ಸಿಎಂ ಬಳಿ ಮನವಿ ಮಾಡಿದ್ದೇವೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಿಯೋಗದ ಜೊತೆ ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಚಂಡಮಾರುತಕ್ಕೆ ರಸ್ತೆ, ಮೀನುಗಾರಿಕೆ ದಾರಿ, ಸೇತುವೆ ಹಾನಿಯಾಗಿವೆ. ಹೀಗಾಗಿ ಪರಿಹಾರಕ್ಕೆಮನವಿ ಮಾಡಿದ್ದೇವೆ. ಇಂದು ಸಚಿವ ಅಂಗಾರ ಜೊತೆ ಸಿಎಂ ಭೇಟಿ ಮಾಡಿದ್ದೇವೆ. ಇದರ ಬಗ್ಗೆ ಗಮನಹರಿಸುವುದಾಗಿ ಸಿಎಂ ಹೇಳಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಿದ್ದೇವೆ. ಲಸಿಕೆ, ಆಕ್ಸಿಜನ್ ಟ್ಯಾಂಕ್ಗೆ ಬೇಡಿಕೆ ಇಟ್ಟಿದ್ದೇವೆ. ವೆಂಟಿಲೇಟರ್ಗೂ ಮನವಿ ಮಾಡಿದ್ದೇವೆ ಎಂದರು.
ಪ್ಯಾಕೇಜ್ನಲ್ಲಿ ಅರ್ಚಕರಿಗೆ ನೆರವು ಘೋಷಿಸಿಲ್ಲವೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಸ್ತಿಕ್ ಹೆಚ್ಚಳ ಮಾಡುವಂತೆ ಕೇಳಿದ್ದಾರೆ. ಇಂದು ಅರ್ಚಕರು ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅರ್ಚಕರು, ಮೀನುಗಾರರ ಬೇಡಿಕೆಗಳನ್ನು ಸಿಎಂಗೆ ತಿಳಿಸಿದ್ದೇವೆ. ಸಿಎಂ ಕೂಡ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆ ಪ್ಯಾಕೇಜ್ ಘೋಷಿಸಿದ್ದಾರೆ ಎಂದರು.
ಓದಿ: ರಾಜ್ಯದಲ್ಲಿ ತೌಕ್ತೆ ಅಬ್ಬರ ಏನೆಲ್ಲಾ ಹಾನಿ... ವಿಪತ್ತು ನಿರ್ವಹಣಾ ಸಂಸ್ಥೆ ವರದಿ ಇಲ್ಲಿದೆ