ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಚಿವ ಕೆ. ಗೋಪಾಲಯ್ಯ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ನಿನ್ನೆ ಸಭೆ ನಡೆಸಿ ಸ್ವಚ್ಛತೆ ಸೇರಿದಂತೆ ಎಲ್ಲಾ ರೀತಿಯ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.
ಪ್ರತಿ ವಾರ್ಡ್‍ಗಳ ಎಲ್ಲಾ ರಸ್ತೆಗಳಲ್ಲಿ ಪ್ರಪ್ರಥಮವಾಗಿ ಔಷಧಿ ಸಿಂಪಡಣೆ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ದಿನನಿತ್ಯ ಔಷಧ ಸಿಂಪಡಣೆ ಕುರಿತ ಮಾಹಿತಿಯನ್ನು ಒದಗಿಸುವಂತೆ ಆದೇಶಿಸಿದರು. ರಸ್ತೆ ಬದಿ ವ್ಯಾಪಾರಗಳನ್ನು ಮುಚ್ಚಿಸಬೇಕು. ಒಂದು ವೇಳೆ ಇಂತಹ ವ್ಯಾಪಾರ ನಡೆಸದಂತೆ ಕ್ರಮ ವಹಿಸಲು ಪೊಲೀಸರ ನೆರವು ಬೇಕಾದರೆ ಪಡೆಯಿರಿ ಎಂದು ಸೂಚಿಸಿದರು. ಕೊರೊನಾ ವೈರಸ್ ತಡೆಗಟ್ಟಲು ಎಲ್ಲರೂ ಮುಂದಾಗಬೇಕು, ಸಭೆ, ಸಮಾರಂಭಗಳನ್ನು ನಿಲ್ಲಿಸುವಂತೆ ಅವರು ಸಲಹೆ ನೀಡಿದರು. ಹೆಚ್ಚಿನ ಜನ ಸೇರುವ ಸ್ಥಳಗಳಲ್ಲಿ ಜಾಗ್ರತೆ ವಹಿಸಿರಿ, ಸರ್ಕಾರ ನಿಮ್ಮ ಜೊತಗಿದೆ, ಸರ್ಕಾರದೊಂದಿಗೆ ನೀವೂ ಸಹಕರಿಸಿ ಎಂದು ಸಚಿವರು ತಿಳಿಸಿದರು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲು ಅರಿವು ಮೂಡಿಸಲಾಗುತ್ತಿದ್ದು, ಅದನ್ನು ಎಲ್ಲರೂ ಪಾಲಿಸುವಂತೆ ಕರೆ ನೀಡಿದ್ರು. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಮಾದಕ ವಸ್ತು ಮಾರಾಟದಂತಹ ಜಾಲಗಳಿಂದಾಗಿ ಯುವ ಜನರ ಮೇಲೆ ಪ್ರಭಾವ ಬೀರುತ್ತಿದೆ. ಸ್ಲಮ್ ಮತ್ತು ಮೋರಿಗಳ ಬಳಿ ಇಂತಹ ದಂಧೆ ನಡೆಯದಂತೆ ಪೊಲೀಸರು ಸೂಕ್ತ ಕ್ರಮ ವಹಿಸುವಂತೆ ಸಚಿವರು ಆದೇಶಿಸಿದರು.
ಬೇಸಿಗೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಯಾವುದೇ ರೀತಿಯಲ್ಲೂ ನೀರಿನ ಅಭಾವ ಉಂಟಾಗದಿರಲು ಅಗತ್ಯವಿರುವ ವ್ಯವಸ್ಥೆಗಳನ್ನು ಕೈಗೊಳ್ಳಿ. ಅದೇ ರೀತಿ ಕಸ ವಿಲೇವಾರಿಯಂತಹ ಕೆಲಸಗಳ ಬಗ್ಗೆ ಜಾಗ್ರತೆ ವಹಿಸಿ, ಸಾಂಕ್ರಾಮಿಕ ರೋಗ ತಡೆಗೆ ಮುಂದಾಗಿ ಎಂದರು.