ಬೆಂಗಳೂರು: ಔಷಧ ವಲಯದ ಉದ್ದಿಮೆಗಳು ತಮ್ಮ ಸಾಂಸ್ಥಿಕ ಹೊಣೆಗಾರಿಕೆ ನಿಧಿಯನ್ನು ಲಸಿಕಾ ಆಂದೋಲನಕ್ಕೆ ದೇಣಿಗೆ ನೀಡುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೋರಿದರು.
ಕೇಂದ್ರ ಸರ್ಕಾರ ಶೇ. 75 ರಷ್ಟು ಲಸಿಕೆಯನ್ನು ರಾಜ್ಯಕ್ಕೆ ಉಚಿತವಾಗಿ ನೀಡುತ್ತಿದೆ. ಉಳಿದ ಶೇ.25 ರಷ್ಟನ್ನು ಖಾಸಗಿ ವಲಯಕ್ಕೆ ಹಂಚಿಕೆ ಮಾಡಿದೆ. ಖಾಸಗಿ ವಲಯಕ್ಕೆ ನೀಡಿರುವ ಲಸಿಕೆಯನ್ನು ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (CSR) ನಿಧಿಯಡಿ ಖರೀದಿಸಿ ದೇಣಿಗೆ ರೂಪದಲ್ಲಿ ನೀಡುವಂತೆ ಕೇಳಿಕೊಂಡರು.
ತಜ್ಞರ ಅಭಿಪ್ರಾಯದ ಪ್ರಕಾರ, ಕೋವಿಡ್ ಮೂರನೇ ಅಲೆ ಅಷ್ಟೇನು ಪರಿಣಾಮಕಾರಿ ಅಲ್ಲ ಎನ್ನಲಾಗುತ್ತಿದೆ. ಆದರೂ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಎರಡು ಡೋಸ್ ಲಸಿಕೆ ಪಡೆದವರಿಗೆ ಸೋಂಕು ತೀವ್ರವಾಗಿ ಪರಿಣಾಮ ಬೀರುವುದಿಲ್ಲ ಮತ್ತು ಸಾವು ಸಂಭವಿಸುವುದಿಲ್ಲ ಎಂಬುದು ರುಜುವಾತಾಗಿದೆ. ತ್ವರಿತವಾಗಿ ಲಸಿಕೆ ನೀಡುವುದರಿಂದ ಸಂಭವನೀಯ ಮೂರನೇ ಅಲೆಯಿಂದ ಸಂರಕ್ಷಣೆ ಸಾಧ್ಯ. ಹೀಗಾಗಿ, ಸರ್ಕಾರದ ಜತೆ ಉದ್ದಿಮೆಗಳು ಕೈ ಜೋಡಿಸಿದರೆ ಗುರಿ ಸಾಧ್ಯ ಎಂದರು.
ಔಷಧ ವಲಯ ಮಾತ್ರವಲ್ಲದೆ, ಪೌಷ್ಟಿಕ ಆಹಾರ ಮತ್ತು ಸೌಂದರ್ಯವರ್ಧಕ ಉದ್ದಿಮೆದಾರರ ಜತೆಗೂ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಿಎಸ್ಆರ್ ನಿಧಿಯ ನೆರವನ್ನು ಲಸಿಕಾ ಆಂದೋಲನಕ್ಕೂ ವಿಸ್ತರಿಸಲು ಮನವಿ ಮಾಡಲಾಗುವುದು. ಇದು ಸರ್ಕಾರ ಮಾತ್ರವಲ್ಲದೆ, ಸಮಾಜದ ಎಲ್ಲರ ಹೊಣೆಗಾರಿಕೆ ಆಗಿರುವುದರಿಂದ ಉದ್ದಿಮೆಗಳು ನೆರವಿನ ಹಸ್ತ ಚಾಚಬೇಕು ಎಂದು ಸಚಿವರು ಹೇಳಿದರು.
ಔಷಧ ಉದ್ದಿಮೆದಾರರ ಭರವಸೆ
ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉದ್ದಿಮೆ ಪ್ರತಿನಿಧಿಗಳು, ಔಷಧ ವಲಯದ ಸಂಘಟನೆ ಮೂಲಕ ಮತ್ತು ತಮ್ಮ ಉದ್ದಿಮೆಗಳ ಮೂಲಕ ಸರ್ಕಾರದ ಲಸಿಕಾ ಆಂದೋಲನಕ್ಕೆ ನೆರವಾಗುವುದಾಗಿ ಭರವಸೆ ನೀಡಿದರು. ಸರ್ಕಾರದ ಸಂದೇಶವನ್ನು ತಮ್ಮ ಕಂಪನಿಗಳ ಆಡಳಿತ ಮಂಡಳಿಗೆ ತಿಳಿಸಿ ಆದಷ್ಟು ಬೇಗ ಪ್ರತಿಕ್ರಿಯೆ ನೀಡುವುದಾಗಿ ಸಭೆಯಲ್ಲಿ ಸ್ಪಷ್ಟಪಡಿಸಿದರು.