ಬೆಂಗಳೂರು: ಕೊರೊನಾದಿಂದ ವಿಶ್ವದಾದ್ಯಂತ ಪ್ರವಾಸೋದ್ಯಮ ವಲಯಕ್ಕೆ ದೊಡ್ಡ ಆಘಾತವಾಗಿದ್ದು, ಲಾಕ್ಡೌನ್ ನಂತರ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು ಅಗತ್ಯವಾದ ಕ್ರಮಗಳ ಬಗ್ಗೆ ಪ್ರವಾಸೋದ್ಯಮದ ಉದ್ದಿಮೆ ಪ್ರತಿನಿಧಿಗಳ ಜತೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ವಿಡಿಯೋ ಸಂವಾದ ನಡೆಸಿದರು.
ಪ್ರವಾಸೋದ್ಯಮ ವಲಯದ ಎಲ್ಲಾ ಉದ್ದಿಮೆದಾರರ ಸಂಕಷ್ಟವನ್ನು ಆಲಿಸಿದ ಸಿ.ಟಿ. ರವಿ, ಸರ್ಕಾರ ಎಂದಿಗೂ ಉದ್ದಿಮೆದಾರರ ಜೊತೆಗಿರುತ್ತದೆ. ಈ ದಿನ ಅವರುಗಳ ಬೇಡಿಕೆ ಸಲಹೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಉದ್ದಿಮೆದಾರರ ಕೋರಿಕೆಯ ಬಗ್ಗೆ ಸಿಎಂ ಹಾಗು ಕೇಂದ್ರ ಪ್ರವಾಸೋದ್ಯಮ ಸಚಿವರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.
![ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ವಿಡಿಯೋ ಸಂವಾದ](https://etvbharatimages.akamaized.net/etvbharat/prod-images/kn-bng-08-ct-ravi-video-meeting-script-7208080_27042020221005_2704f_1588005605_380.jpg)
ಕೋವಿಡ್-19ನಿಂದಾಗಿ ಲಾಕ್ಡೌನ್ ವಿಧಿಸಿದ್ದರಿಂದ ರಾಜ್ಯಕ್ಕೆ ಭೇಟಿ ನೀಡಿದ ವಿವಿಧ ದೇಶದ ಪ್ರವಾಸಿಗರು, ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ. ಭಾರತದಲ್ಲಿರುವ ವಿವಿಧ ರಾಷ್ಟ್ರಗಳ ರಾಯಭಾರಿ ಕಚೇರಿಗಳು ಪ್ರವಾಸಿಗರ ಅನುಕೂಲಕ್ಕಾಗಿ ಬೆಂಗಳೂರು, ಚೆನ್ನೈ, ತಿರುವನಂತಪುರ, ಗೋವಾ ಹಾಗೂ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ವಿಶೇಷ ವಿಮಾನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಈ ವಿದೇಶಿ ಪ್ರವಾಸಿಗರು ಸುಲಭವಾಗಿ ತಮ್ಮ ತವರಿಗೆ ಮರಳಲು ವಿವಿಧ ರೀತಿಯ ಸಹಕಾರವನ್ನು ನೀಡಿದೆ. ಇಲ್ಲಿಯವರೆಗೆ 26 ದೇಶಗಳ ಸುಮಾರು 3,200 ವಿದೇಶಿ ಪ್ರವಾಸಿಗರು ಸುರಕ್ಷಿತವಾಗಿ ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ. ವಿದೇಶಿ ಪ್ರವಾಸಿಗರ ಸ್ಥಳಾಂತರ ಕಾರ್ಯದಲ್ಲಿ ಕೈಜೋಡಿಸಿದ ಎಲ್ಲರಿಗೂ ಸಚಿವರು ಅಭಿನಂದಿಸಿದರು.