ಬೆಂಗಳೂರು : ಫೇಕ್ ಲೆಟರ್ ಇಟ್ಕೊಂಡು ಪೇ ಸಿಎಸ್ ಅಂದರೇ ಏನು ಪ್ರಯೋಜನ. ನನಗೆ ಪ್ರಚಾರ ಕೊಡುತ್ತಿದ್ದಾರೆ, ಕೊಡಲಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೇಸಿಎಂ ಅಂತಾ 40% ಕಮಿಷನ್ ಕುರಿತು ಬಿಜೆಪಿ ಬಗ್ಗೆ ಆಂದೋಲನ ನಡೀತು. ಇದೀಗ 5 ಗ್ಯಾರಂಟಿ ನೋಡಿ ಜೆಡಿಎಸ್, ಬಿಜೆಪಿಗೆ ನಿರಾಸೆ ಆಗಿದೆ. ಕಾಂಗ್ರೆಸ್ 135 ಸೀಟು ಗೆದ್ದಿರೋದನ್ನು ನೋಡಿ ಅವರು ಗಾಬರಿ ಆಗಿದ್ದಾರೆ. ಲೋಕಸಭೆ ಎಲೆಕ್ಷನ್ ಎದುರಿಸೋಕೆ ಅವರಿಗೆ ಭಯವಾಗಿದೆ ಎಂದು ಟಾಂಗ್ ಕೊಟ್ಟರು.
ಬುಧವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಫೇಕ್ ಲೆಟರ್ ಎಂದು ಗವರ್ನರ್ ಆಫೀಸ್ ನವರೇ ಹೇಳಿದ್ದಾರೆ. ಆ ಲೆಟರ್ ಇಟ್ಕೊಂಡು ಪೇ ಸಿಎಸ್ ಅಂದ್ರೆ ಏನು ಪ್ರಯೋಜನ. ನನಗೆ ಪ್ರಚಾರ ಕೊಡ್ತಿದ್ದಾರೆ, ಕೊಡಲಿ. ಮಂಡ್ಯ ಜಿಲ್ಲೆಯಲ್ಲಿ 2018ರ ಸಂದರ್ಭದಲ್ಲಿ 7 ಜನ ಶಾಸಕರು, ಮೂವರು ಎಂಎಲ್ಸಿ ಎಲ್ಲಾ ಸೇರಿ ಹತ್ತು ಮಂದಿ ಜೆಡಿಎಸ್ನಲ್ಲಿದ್ದರು. ಆದರೇ ಇದೀಗ 6 ಶಾಸಕರು, 3 ಎಂಎಲ್ಸಿಗಳು ಕಾಂಗ್ರೆಸ್ ನವರಿದ್ದಾರೆ. ಜೆಡಿಎಸ್ ಒಂದು ಕಡೆ ಇರುವುದರಿಂದ ಪಾಪ ಅವರಿಗೆ ಏನಾಗಬೇಡ ಹೇಳಿ. ನಾವು ಕರೆಕ್ಟ್ ಆಗಿದ್ರೆ, ನಾವೇಕೆ ಆತಂಕ ಪಡಬೇಕು ಎಂದು ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ರಾಜ್ಯಭವನಕ್ಕೆ ಕೃಷಿ ಸಚಿವರ ಭೇಟಿ : ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿರುವ ವಿಚಾರವಾಗಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ಶಾಸಕರ ನಿಯೋಗ ಬುಧವಾರ ರಾಜಭವನಕ್ಕೆ ಭೇಟಿ ನೀಡಿತ್ತು. ಪತ್ರ ಸಂಬಂಧ ಕೆಲವೊಂದು ಮಾಹಿತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಚರ್ಚೆ ಮಾಡಿದ್ದು, ಪ್ರಕರಣದ ಹಿಂದೆ ರಾಜಕೀಯ ಕಾರಣ ಇದೆ ಎಂದು ನಿಯೋಗವು ರಾಜ್ಯಪಾಲರ ಗಮನಕ್ಕೆ ತಂದಿತ್ತು.
ಇದನ್ನೂ ಓದಿ : ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆದಾರರ ಬಾಕಿ ಬಿಲ್, ಚಲುವರಾಯಸ್ವಾಮಿ ವಿರುದ್ಧದ ದೂರಿನ ಪತ್ರದ ಬಗ್ಗೆ ಗಂಭೀರ ಚರ್ಚೆ
ಮಂಡ್ಯ ಜಿಲ್ಲೆಯ ಶಾಸಕರಾದ ಪಿ ಎಂ ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿ ಗಣಿಗ, ಕೆ ಎಂ ಉದಯ್ ಗೌಡ, ದಿನೇಶ್ ಗೂಳಿಗೌಡ, ಮಧು ಮಾದೇಗೌಡ ಹಾಗೂ ಮಾಜಿ ಶಾಸಕರಾದ ಹೊನ್ನಲಗೆರೆ ಶ್ರೀರಾಮ ಕೃಷ್ಣ, ಕೆ ಬಿ ಚಂದ್ರಶೇಖರ್ ಒಳಗೊಂಡ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದರೂ ಕೆಲವೊಂದು ಸ್ಪಷ್ಟೀಕರಣ ನೀಡಿ ಮಾಹಿತಿ ನೀಡಿತ್ತು.