ಬೆಂಗಳೂರು : ಬಿಜೆಪಿ ಜೊತೆಗಿನ ಮೈತ್ರಿ ಬಹುಶಃ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಹಾಗೂ ಜೆಡಿಎಸ್ ಶಾಸಕರಿಗೆ ಇಷ್ಟ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಮೈತ್ರಿ ಅಗತ್ಯ ಇದೆ ಎಂದು ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ದೇವೇಗೌಡರಿಗೆ ಮೈತ್ರಿ ಬಗ್ಗೆ ಬಹುಶ: ಇಷ್ಟ ಇದ್ದಂಗಿಲ್ಲ. ಬಿಜೆಪಿ ಜೊತೆ ಮೈತ್ರಿ ದೇವೇಗೌಡರಿಗೆ, ಪಕ್ಷದ ಶಾಸಕರಿಗೆ ಇಷ್ಟ ಇದಿಯೋ ಗೊತ್ತಿಲ್ಲ. ಆದರೆ ಕುಮಾರಸ್ವಾಮಿ ಅವರಿಗೆ ಅಗತ್ಯ ಇದೆ. ಕುಮಾರಸ್ವಾಮಿ ಅವರು 2008ರಲ್ಲಿ ಯಡಿಯೂರಪ್ಪ ಅವರಿಗೆ ಏಕೆ ಅಧಿಕಾರ ಹಸ್ತಾಂತರ ಮಾಡಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಲೋಕಸಭೆಯಲ್ಲಿ ಉತ್ತಮ ಫಲಿತಾಂಶ ಬರಲಿದೆ. ನೂರಕ್ಕೆ ನೂರು ನಮಗೆ ಲೋಕಸಭೆಯಲ್ಲಿ ಒಳ್ಳೆಯ ಫಲಿತಾಂಶ ಬರಲಿದೆ. ಬಿಜೆಪಿ -ಜೆಡಿಎಸ್ ಮೈತ್ರಿಯಿಂದ ನಮಗೆ ಅನುಕೂಲವಾಗಲಿದೆ. ಮೈತ್ರಿಯಿಂದ ಅಸಮಾಧಾನಗೊಂಡ ಜೆಡಿಎಸ್ ಹಾಗೂ ಬಿಜೆಪಿ ಸ್ಥಳೀಯ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ಗೆ ಬರುತ್ತಿದ್ದಾರೆ ಎಂದು ತಿಳಿಸಿದರು.
ಮೋಡ ಬಿತ್ತನೆ ಪ್ರಸ್ತಾಪ ಇಲ್ಲ: ಮೋಡ ಬಿತ್ತನೆ ಬಗ್ಗೆ ಕೃಷಿ ಇಲಾಖೆಯಲ್ಲಿ ಯಾವುದೇ ಚರ್ಚೆ ಆಗಿಲ್ಲ. ನಮ್ಮ ಮುಂದೆ ಆ ಪ್ರಸ್ತಾಪ ಇಲ್ಲ. ಡಿಸಿಎಂ ಯಾವ ಕಾರಣದಿಂದ ಹೇಳಿದ್ದಾರೆ ಎಂದು ಗೊತ್ತಿಲ್ಲ. ರೈತರ ಹಿತದೃಷ್ಟಿಯಿಂದ ಡಿಸಿಎಂ ಹೇಳಿರಬಹುದು ಎಂದು ಇದೇ ವೇಳೆ ಹೇಳಿದರು.
58 ಲಕ್ಷ ಮೆಟ್ರಿಕ್ ಟನ್ ಕೃಷಿ ಉತ್ಪಾದನೆ ನಷ್ಟ ಸಾಧ್ಯತೆ : ಈ ಬಾರಿ ಕೃಷಿ ಉತ್ಪಾದನೆಯಲ್ಲಿ 116 ಲಕ್ಷ ಮೆಟ್ರಿಕ್ ಟನ್ ಸಾಧಿಸುವ ಗುರಿ ಇತ್ತು. ಬರದ ಹಿನ್ನೆಲೆ ಈ ಬಾರಿ 58 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಕೊರತೆ ಆಗಬಹುದು. ಬರದ ಹಿನ್ನೆಲೆ ಕೃಷಿ ಉತ್ಪಾದನೆಯಲ್ಲಿ ಅರ್ಧದಷ್ಟು ಕುಸಿತ ಕಾಣಬಹುದು. ರಾಗಿ, ಜೋಳ, ಭತ್ತ ಉತ್ಪಾದನೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಕೆಲವು ಕಡೆ ಮಳೆ ಆಗುತ್ತಿದೆ. ಹೀಗಾಗಿ ಸ್ವಲ್ಪ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈವರೆಗೆ ಬರ ಪರಿಹಾರ ನೀಡಿಲ್ಲ. ಕೇಂದ್ರಕ್ಕೆ ಈಗಾಗಾಲೇ ಬರ ಪರಿಹಾರ ಸಂಬಂಧ ಮೆಮೊರಂಡಂ ಸಲ್ಲಿಸಲು ನಿರ್ಧರಿಸಲಾಗಿದೆ. ಸದ್ಯದಲ್ಲೇ ಕಂದಾಯ ಸಚಿವರು ಕೇಂದ್ರಕ್ಕೆ ಮನವಿ ಸಲ್ಲಿಸಲು ದೆಹಲಿಗೆ ತೆರಳಲಿದ್ದಾರೆ. ಬಳಿಕ ಬರ ಪರಿಹಾರ ನೀಡಲಾಗುವುದು. ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಬೆಳೆ ಸಮೀಕ್ಷೆ ನಡೆಸುತ್ತಿವೆ. ಅದಕ್ಕೆ ಸೆ.30ಕ್ಕೆ ಡೆಡ್ ಲೈನ್ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಬೃಹತ್ ಕಟಾವು ಹಬ್ : ಬೃಹತ್ ಕಟಾವು ಹಬ್ ಸ್ಥಾಪಿಸಲು ಈ ವರ್ಷ 50 ಕೋಟಿ ರೂ. ಮೀಸಲಿರಿಸಲಾಗಿದೆ. ಸುಮಾರು 100 ಹಬ್ ಸ್ಥಾಪಿಸಲಾಗುವುದು. ಕೃಷಿ ನವೋದ್ಯಮ ಸ್ಥಾಪನೆಗೆ 10 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಅಂದು ಕಾಂಗ್ರೆಸ್ ಜೊತೆ ಹೋಗುವುದಕ್ಕಿಂತ ಬಿಜೆಪಿ ಜೊತೆ ಹೋಗಿದ್ದರೆ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಿದ್ದೆ: ಹೆಚ್ ಡಿ ಕುಮಾರಸ್ವಾಮಿ