ಬೆಂಗಳೂರು: ಮುಂಗಾರು ಬೆಳೆ ಸಮೀಕ್ಷೆ ಶೇ. 100ರಷ್ಟು ಯಶಸ್ವಿಯಾದ ಬೆನ್ನಲ್ಲೇ ಕೃಷಿ ಇಲಾಖೆ ಮುಂಗಾರು ಬೆಳೆ ಸಮೀಕ್ಷೆ ನಡೆಸಿದ ಮಾದರಿಯಲ್ಲಿಯೇ ಹಿಂಗಾರು ಬೆಳೆ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ.
ಹಿಂಗಾರು ಬೆಳೆ ಸಮೀಕ್ಷೆ ಸಂಬಂಧ ಕೃಷಿ ಸಚಿವ ಬಿ.ಸಿ.ಪಾಟೀಲ್ ಇಲಾಖಾಧಿಕಾರಿಗಳ ಜೊತೆ ವಿಕಾಸಸೌಧದಲ್ಲಿ ಇಂದು ಮಹತ್ವದ ಸಭೆ ನಡೆಸಿದರು. ರೈತರು ತಮ್ಮ ಬೆಳೆ ಜಮೀನಿನ ಸಮೀಕ್ಷೆಯನ್ನು ತಾವೇ ಆ್ಯಪ್ ಮೂಲಕ ನಡೆಸಿದ್ದು, ಇದೇ ಮಾದರಿಯಲ್ಲಿಯೇ ಹಿಂಗಾರು ಬೆಳೆ ಸಮೀಕ್ಷೆಯನ್ನು ಕೂಡ ಯಶಸ್ವಿಯಾಗಿ ನಡೆಸುವ ಬಗ್ಗೆ ಸಚಿವರು ಇಲಾಖಾಧಿಕಾರಿಗಳ ಜೊತೆ ಚರ್ಚಿಸಿದರು.
ಮಾಸ್ಟರ್ಸ್ಗಳಿಗೆ ಹಿಂಗಾರು ಬೆಳೆ ಸಮೀಕ್ಷೆ ಬಗ್ಗೆ ತರಬೇತಿ ನೀಡುವುದು, ಮಾಸ್ಟರ್ಸ್ ತರಬೇತುದಾರರಿಂದ ಖಾಸಗಿ ನಿವಾಸಿಗಳಿಗೆ (ಪಿಆರ್ಒ) ರೈತರ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ತರಬೇತಿ ನೀಡಿ ಬಳಿಕ ಆ್ಯಪ್ ಮೂಲಕ ರೈತರೇ ತಮ್ಮ ಬೆಳೆ ಸಮೀಕ್ಷೆಯನ್ನು ತಾವೇ ನಡೆಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಮಾಹಿತಿ ಪಡೆಯಲಾಯಿತು.
ಈ ಸಂದರ್ಭದಲ್ಲಿ ಮುಂಗಾರು ಬೆಳೆ ಸಮೀಕ್ಷೆ ಯಶಸ್ಸಿಗೆ ಕೃಷಿ ಇಲಾಖೆ ಜೊತೆ ಸಹಕರಿಸಿದ ಕಂದಾಯ, ರೇಷ್ಮೆ, ತೋಟಗಾರಿಕೆ ಇಲಾಖೆಗೂ ಸಚಿವರು ಧನ್ಯವಾದ ಸಲ್ಲಿಸಿದ್ದಾರೆ.
ಡಿಸೆಂಬರ್ ಮೊದಲ ವಾರದಲ್ಲಿ ಹಿಂಗಾರು ಬೆಳೆ ಸಮೀಕ್ಷೆ ರೈತರ ಆ್ಯಪ್ ಬಿಡುಗಡೆಯಾಗಲಿದ್ದು, ಶೀಘ್ರದಲ್ಲಿಯೇ ದಿನಾಂಕ ಪ್ರಕಟಿಸುವುದಾಗಿ ಹಾಗೂ ಮುಂಗಾರು ಬೆಳೆ ಸಮೀಕ್ಷೆ ಯಶಸ್ವಿಯಾದಂತೆ ಹಿಂಗಾರು ಬೆಳೆ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಕತ್ರಿ, ನಿರ್ದೇಶಕ ಶ್ರೀನಿವಾಸ್, ಹೆಚ್ಚುವರಿ ನಿರ್ದೇಶಕ ಆ್ಯಂತೋನಿ ಎಂ. ಇಮ್ಯಾನುಲ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.