ಬೆಂಗಳೂರು : ರಾಜೀವ್ ಗಾಂಧಿ ಖೇಲ್ ರತ್ನ ಹೆಸರು ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥ್ ನಾರಾಯಣ್, ಇದು ರಾಜಕೀಯ ರತ್ನ ಅಲ್ಲ, ಕ್ರೀಡಾ ರತ್ನ. ಇದರಲ್ಲಿ ರಾಜಕೀಯ ತರಬಾರದು, ಧ್ಯಾನ್ ಚಂದ್ ಮಹಾನ್ ಕ್ರೀಡಾಪಟು, ಕ್ರೀಡಾಪಟುಗಳಿಗೆ ಅವರು ಸ್ಫೂರ್ತಿ.
ನಾವು ಯಾವುದೇ ಕ್ರೀಡಾಂಗಣದ ಹೆಸರು ಬದಲಿಸಿಲ್ಲ. ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಿಸಿರೋದು. ಇದರಲ್ಲಿ ಕಾಂಗ್ರೆಸ್‌ನವರು ರಾಜಕೀಯ ಮಾಡುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸಭೆ : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಶ್ವತ್ಥ್ ನಾರಾಯಣ್, ಬಿಜೆಪಿಯನ್ನು ಅಲ್ಪಸಂಖ್ಯಾತ ವಿರೋಧಿ ಅಂತಾ ಬಿಂಬಿಸಲಾಗುತ್ತಿದೆ. ಅದು ಸುಳ್ಳು, ನಾವೆಲ್ಲ ಒಗ್ಗಟ್ಟಾಗಿ ನಡೆಯಬೇಕು.
ನಮ್ಮ ದೇಶಕ್ಕೆ ಏನೇ ಸಮಸ್ಯೆ ಆದರೂ, ನಾವೇ ಬಗೆಹರಿಸಿಕೊಳ್ಳಬೇಕು. ಯಾವುದೇ ದೇಶದವರು ಇಲ್ಲಿಗೆ ಬಂದು ಸಮಸ್ಯೆ ಆಲಿಸೋದಲ್ಲ. ನಮ್ಮ ಬಾಂಧವ್ಯ, ನಮ್ಮ ಸಮಸ್ಯೆ ನಾವೇ ಬಗೆಹರಿಸಿಕೊಳ್ಳಬೇಕು ಎಂದರು.
ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ, ನಮ್ಮ ಸ್ಪರ್ಧೆ ಹಿಂದೂ-ಮುಸ್ಲಿಂ ಅಥವಾ ಹಿಂದೂ-ಕ್ರಿಶ್ಚಿಯನ್ ಅಲ್ಲ. ನಮ್ಮ ಸ್ಪರ್ಧೆ ಏನಿದ್ದರೂ ಅಮೆರಿಕಾ, ಚೀನಾ, ಜಪಾನ್ ದೇಶದ ಜೊತೆಯಲ್ಲಿ ಇರಬೇಕು ಎಂದು ಸಚಿವ ಅಶ್ವತ್ಥ್ ನಾರಾಯಣ್ ಕರೆ ನೀಡಿದರು.
ನಮ್ಮತ್ರ ಜಮೀನಿದೆ, ದುಡ್ಡಿದೆ ಅಂದರೆ ಆಗಲ್ಲ. ನಮ್ಮತ್ರ ಟೆಕ್ನಾಲಜಿ ಇದೆ, ನಮ್ಮತ್ರ ಪೆಟ್ರೋಲ್ ಇದೆ ಅನ್ನೋ ಸ್ಪರ್ಧೆ ಹೆಚ್ಚಾಗುತ್ತಿದೆ. ಪ್ರಧಾನಿ ಇಂದು ರಾಷ್ಟ್ರೀಯ ಶಿಕ್ಷಣ ನೀತಿ ನೀಡಿದ್ದಾರೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ರಾಷ್ಟ್ರೀಯ ಶಿಕ್ಷಣ ನೀತಿ. ಇದರಿಂದಲೇ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
ಎಲ್ಲರೂ ಶಿಕ್ಷಣ ಪಡೆಯಬೇಕು. ನಮ್ಮ ಪರಿಶ್ರಮ ತೊಡೆ ತಟ್ಟೋದರಲ್ಲಿ, ಭುಜ ತಟ್ಟುವುದರಲ್ಲಿ ಅಲ್ಲ. ಬದಲಾಗಿ ಶಿಕ್ಷಣ ಪಡೆಯುವುದರಲ್ಲಿ ಇರಬೇಕು. ಇಂದು ಮುಸ್ಲಿಂ ಧರ್ಮದವರಲ್ಲಿ ಶಿಕ್ಷಣ ಪಡೆದವರ ಕೊರತೆ ಇದೆ. ಎಲ್ಲರೂ ಶಿಕ್ಷಣ ಪಡೆಯುವಂತಾಗಬೇಕು ಎಂದರು.
ಆಸ್ತಿ ಇಲ್ಲದವರಿಗೂ ಕೇಂದ್ರ ಸರ್ಕಾರ ಸಾಲ ನೀಡುವ ಭರವಸೆ ನೀಡಿದ್ದು, ಅದರಿಂದ ವ್ಯಾಪಾರ, ವಹಿವಾಟು ಮಾಡಲು ಅನುಕೂಲ ಮಾಡಿಕೊಟ್ಟಿದೆ. ಅಬ್ದುಲ್ ಕಲಾಂ ಅವರಂತೆ ಶಿಕ್ಷಿತರಾಗಬೇಕು. ನೀವು ಸಹ ರಾಜಕೀಯ ಮಾಡುತ್ತಾ ಕೂರಬೇಡಿ. ನೀವು ಮುಂದೆ ಹೋಗಿ, ನಾಲ್ಕು ಜನರ ಕೈ ಹಿಡಿಯಿರಿ. ಎಲ್ಲರನ್ನೂ ಬೆಳೆಸುವಂತ ಕೆಲಸ ಮಾಡಿ. ನಾವಿರೋ ಪಕ್ಷದ ಮುಖಾಂತರ ನಾಲ್ಕು ಜನರಿಗೆ ಸಹಾಯ ಮಾಡಿ ಎಂದರು.
ಖಾತೆ ಹಂಚಿಕೆ ಅಸಮಾಧಾನ ಶಮನ ಮಾಡಲಿದ್ದಾರೆ : ಖಾತೆ ಹಂಚಿಕೆ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥ್ ನಾರಾಯಣ್, ಸಚಿವ ಸಂಪುಟ ರಚನೆಯಾದಾಗ, ಖಾತೆ ಹಂಚಿಕೆಯಾದಾಗ ಅಸಮಾಧಾನ ಬರುವುದು ಸಹಜ. ಈ ಬಗ್ಗೆ ಸಿಎಂ ಮಾತಾಡಿದ್ದಾರೆ, ಎಲ್ಲವನ್ನ ಸರಿಪಡಿಸಿಕೊಂಡು ಒಟ್ಟಾಗಿ ಹೋಗುವ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಇಟಿಗೆ ಸಿದ್ಧತೆ ಪೂರ್ಣ : ಆಗಸ್ಟ್ 28 ಮತ್ತು 29ರಂದು ಸಿಇಟಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ ಮಾರ್ಗಸೂಚಿಯನುಸಾರವೇ ಪರೀಕ್ಷೆ ನಡೆಸಲಾಗುತ್ತದೆ. ಸಿಬ್ಬಂದಿಗೂ ಈಗಾಗಲೇ ಆನ್ಲೈನ್ ತರಬೇತಿ ನೀಡಲಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಸ್ಪಷ್ಟಪಡಿಸಿದರು.