ಬೆಂಗಳೂರು : ಜನ ಗುಂಪು ಗುಂಪಾಗಿ ಹಾಲು ತರಲು ಮನೆಯಿಂದ ಹೊರ ಬಂದು ಗುಂಪಾಗಿ ಸೇರಿದ್ರೇ ಕೊರೊನಾ ವೈರಸ್ ಹರಿಡೀತೆಂಬ ಭೀತಿಯಿದೆ. ಅದೇ ಕಾರಣಕ್ಕೆ ಲಾಕ್‌ಡೌನ್ ಮಾಡಲಾಗಿದ್ರೂ ಅದರ ಪರಿವೇ ಇಲ್ಲದೇ ಜನ ನೂರಾರು ಸಂಖ್ಯೆಯಲ್ಲಿ ಉಚಿತ ಹಾಲು ಪಡೆಯೋದಕ್ಕೆ ಗುಂಪು ಗುಂಪಾಗಿ ಮುಗಿ ಬಿದ್ದ ಘಟನೆ ಲಗ್ಗೆರೆ ಬ್ರಿಡ್ಜ್ ಬಳಿ ನಡೆದಿದೆ. ಇಲ್ಲಿನ ಸ್ಲಂ ಪ್ರದೇಶಗಳಲ್ಲಿರುವ ಬಡವರಿಗೆ ನಿನ್ನೆಯಿಂದ ಬಿಬಿಎಂಪಿ ಉಚಿತವಾಗಿ ಹಾಲು ವಿತರಣೆ ಮಾಡ್ತಿದೆ. ಆದರೆ, ಹಾಲು ಹಂಚುತ್ತಿರುವುದು ಮಾತ್ರ ಕಸದ ಟಿಪ್ಪರ್‌ನಲ್ಲಿ ಅನ್ನೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಇದೇನಾ ಸ್ವಾಮಿ ಬಡವರಿಗೆ ಹಾಲು ಕೊಡೋ ರೀತಿ.. ಕಸದ ಟಿಪ್ಪರ್‌ನಲ್ಲಿ ಹಾಕಿ.. ಜನ ನೂರಾರು ಸಂಖ್ಯೆಯಲ್ಲಿ ಮುಗಿಬೀಳುವಂತೆ ಮಾಡಿ.. ಒಡೆದ ಪ್ಯಾಕೇಟ್ಗಳ ಹಾಲು ಕೊಡಲಾಗ್ತಿದೆ.. ಉಚಿತ ಹಾಲು ವಿತರಣೆ ಸೂಕ್ತ ರೀತಿ ಆಗದೇ ಕೋವಿಡ್-19 ಹರಡುವ ಭೀತಿ ಹೆಚ್ಚಿಸಿದೆ. ಬಡ ಜನರು ಕೇಳೋದಿಲ್ಲ ಅಂತಾ ಬಿಬಿಎಂಪಿ ಈ ರೀತಿ ಮಾಡ್ತಿದ್ಯಾ? ಅಂತಾ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಉಚಿತ ಹಾಲಿಗಾಗಿ ಜನ ಮುಗಿಬೀಳುವಾಗ ಎಷ್ಟೋ ವಯಸ್ಸಾದವರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.
ಕಸದ ಆಟೋಟಿಪ್ಪರ್ ಮೊದಲೇ ಕಸದಿಂದ ದುರ್ವಾಸನೆ ಹೊಂದಿರುತ್ತೆ. ಅದೇ ಟಿಪ್ಪರ್‌ನಲ್ಲಿ ಹಾಲಿನ ಪ್ಯಾಕೆಟ್ಗಳನ್ನು ಹಾಕಿಕೊಂಡು ಬಂದು ವಿತರಿಸಲಾಗಿದೆ. ಮಹಿಳೆಯರು ಎಷ್ಟೇ ಒದ್ದಾಡಿದ್ರೂ ಹಾಲು ಸಿಗ್ಲಿಲ್ಲ. ಕೇವಲ ಆಟೋಟಿಪ್ಪರ್ ಹತ್ತಿದಲ್ಲಿದ್ದ ಕೆಲ ಪುರುಷರಿಗಷ್ಟೇ ಹಾಲು ಸಿಗುತ್ತಿದೆ.
![milk-distributed-in-wastage-auto](https://etvbharatimages.akamaized.net/etvbharat/prod-images/kn-bng-02-milk-distribution-7202707_04042020095356_0404f_1585974236_363.jpg)
ಇನ್ನೊಂದೆಡೆ ಉಚಿತ ಹಾಲನ್ನು ಲಗ್ಗೆರೆಯ ಹೋಟೆಲ್ಗಳು ಬಳಸಿದ ಘಟನೆಯೂ ನಡೆಯಿತು. ಒಂದು ಲೀಟರ್ ಹಾಲಿಗಾಗಿ ಒಬ್ಬರ ಮೇಲೊಬ್ಬರು ಬಿದ್ದು ಗಲಾಟೆ ನಡೆಯಿತು. ಇನ್ನೊಂದೆಡೆ ಆಟೋ ಹಿಂದೆ ಓಡಿ ಬಂದ ವಯಸ್ಸಾದ ಮಹಿಳೆ ಬಿದ್ದು ಅಸ್ವಸ್ಥರಾದರು.
ನಿನ್ನೆ 2,28,500 ಲೀಟರ್ ಹಾಲು ವಿವಿಧ ಪಾಲಿಕೆ ವಲಯಗಳಲ್ಲಿ ಹಂಚಲಾಗಿತ್ತು. ಇಂದು 3,22,265 ಲೀಟರ್ ಹಾಲಿಗೆ ಬೇಡಿಕೆಯಿತ್ತು. ಎಲ್ಲಾ ವಲಯದ ಸ್ಲಂ ಮನೆಗಳು ಸೇರಿ ಒಟ್ಟು 96,058 ಮನೆಗಳಿಗೆ ಬೆಂಗಳೂರು ಡೈರಿಯಿಂದ ಹಾಲು ತಲುಪಿಸಲು ಪಾಲಿಕೆ ಯೋಜನೆ ರೂಪಿಸಿದೆ. ಆದರೆ, ಅದು ಸಮರ್ಪಕವಾಗಿ ಹಂಚಿಕೆಯಾಗ್ತಿಲ್ಲ ಎಂಬುದಕ್ಕೆ ಈ ಮೇಲಿನ ದೃಶ್ಯವೇ ಸಾಕ್ಷಿ..