ಬೆಂಗಳೂರು : ನಗರದಲ್ಲಿ ಕೊರೊನಾ ಎರಡನೇ ಅಲೆ ರುದ್ರ ತಾಂಡವ ಆಡುತ್ತಿದ್ದು, ಎಲ್ಲರಲ್ಲಿ ಭೀತಿ ಸೃಷ್ಟಿಸಿದೆ. ನಗರದ ಜನರಲ್ಲಿ ಕೊರೊನಾ ಜೊತೆ ಲಾಕ್‌ಡೌನ್ ಭೀತಿ ಕೂಡ ಶುರುವಾಗಿದ್ದು, ಹೊರ ರಾಜ್ಯದ ವಲಸೆ ಕಾರ್ಮಿಕರು ನಗರವನ್ನು ತೊರೆಯುತ್ತಿದ್ದಾರೆ.
ಹೌದು, ಲಾಕ್‌ಡೌನ್ ಭಯದಿಂದ ಬೆಂಗಳೂರು ನಗರ ಖಾಲಿಯಾಗುತ್ತಿದೆ. ವಲಸೆ ಕಾರ್ಮಿಕರು ಗಂಟುಮೂಟೆ ಸಹಿತ ನಗರ ಬಿಡುತ್ತಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರ ದಂಡು ಕಂಡು ಬಂದಿದ್ದು, ಎಲ್ಲಿ ಉದ್ಯಾನನಗರಿಯಲ್ಲಿ ಮತ್ತೆ ಲಾಕ್ ಡೌನ್ ಆಗುತ್ತೋ ಅನ್ನೋ ಭಯದಿಂದ ತಮ್ಮ-ತಮ್ಮ ರಾಜ್ಯಗಳಿಗೆ ವಲಸೆ ಕಾರ್ಮಿಕರು ತೆರಳುತ್ತಿದ್ದಾರೆ.
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ, ಬಿಹಾರ ಮೂಲದ ಕೂಲಿ ಕಾರ್ಮಿಕರು ತಮ್ಮ ಊರು ಸೇರಲು ಸಜ್ಜಾಗಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಚೆಕ್ಕಿಂಗ್‌ಗೆ ಬಿಬಿಎಂಪಿಯಿಂದ ಮಾರ್ಷಲ್ಸ್ ಗಳನ್ನು ನೇಮಕ ಮಾಡಲಾಗಿದೆ.
ಕಳೆದ ವರ್ಷ ಲಾಕ್‌ಡೌನ್ ಹೇರಿದ್ದ ವೇಳೆ ಸಾವಿರಾರು ಕಾರ್ಮಿಕರು ಉದ್ಯೋಗವಿಲ್ಲದೆ ಬೆಂಗಳೂರಲ್ಲಿ ಪರದಾಡಿದ್ದರು. ಅಲ್ಲದೆ, ತಮ್ಮ ಊರುಗಳನ್ನು ತಲುಪಲು ಪಟ್ಟಿದ್ದ ಕಷ್ಟ ಅಷ್ಟಿಷ್ಟಲ್ಲ. ಈ ಬಾರಿಯೂ ಕೊರೊನಾ ತನ್ನ ಆರ್ಭಟ ಮುಂದುವರಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಕಾರ್ಮಿಕರೇ ತಮ್ಮ ರಾಜ್ಯಗಳತ್ತ ಮುಖಮಾಡುತ್ತಿದ್ದಾರೆ.
ಇದನ್ನೂ ಓದಿ : ಈ ಆರು ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ಬರುವ ಪ್ರಯಾಣಿಕರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ