ಬೆಂಗಳೂರು: ನಗರದಲ್ಲಿಂದು ಭಾರಿ ದುರಂತ ಸಂಭವಿಸಿದೆ. ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿತಗೊಂಡು ತಾಯಿ ಮಗ ಸಾವನ್ನಪ್ಪಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ ಬಿಆರ್ ಲೇಔಟ್ ಬಳಿ ಇಂದು ಬೆಳಗ್ಗೆ 9.30ರ ಸುಮಾರಿಗೆ ನಡೆದಿದೆ. ತೇಜಸ್ವಿನಿ (28), ಅವರ ಪುತ್ರ ವಿಹಾನ್ (2.5) ಮೃತಪಟ್ಟವರು.
ಪತ್ನಿಯನ್ನು ಕಚೇರಿಗೆ ಬಿಡಲು ಹೊರಟಿದ್ದ ಪತಿ.. ಇಂದು ಬೆಳಗ್ಗೆ ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ ದಂಪತಿ ತಮ್ಮ ಅವಳಿ ಮಕ್ಕಳ ಜೊತೆ ಬೈಕ್ನಲ್ಲಿ ತೆರಳುತ್ತಿದ್ದರು. ಇವರು ಹೊರಮಾವು ನಿವಾಸಿಗಳಾಗಿದ್ದಾರೆ. ತೇಜಸ್ವಿನಿ ಅವರು ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ತೇಜಸ್ವಿನಿಯನ್ನು ಕೆಲಸಕ್ಕೆ ಬಿಟ್ಟು ನಂತರ ತನ್ನ ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್ ಶಾಲೆಗೆ ಬಿಡಲು ಲೋಹಿತ್ ಕುಮಾರ್ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಮೈಮೇಲೆ ಬಿದ್ದ ಪರಿಣಾಮ ತೇಜಸ್ವಿನಿ, ಗಂಡು ಮಗು ವಿಹಾನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದ್ರೆ ಅಷ್ಟರಲ್ಲೇ ತಾಯಿ ಮಗ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ಲೋಹಿತ್ ಹಾಗೂ ಮತ್ತೊಂದು ಹೆಣ್ಣು ಮಗು ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.
ಅದೇ ರಸ್ತೆಯಲ್ಲೇ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಮೆಟ್ರೋ ಪಿಲ್ಲರ್ ಬಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಲ್ಲಿ ತಾಯಿ ಮಗ ಸಾವನ್ನಪ್ಪಿದ್ದು, ತಂದೆ ಮತ್ತು ಮಗಳ ಸ್ಥಿತಿ ಗಂಭೀರವಾಗಿದೆ. ತಾಯಿ ಮಗುವಿನ ಶವ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆ ರವಾನಿಸಲಾಗುವುದು ಎಂದು 'ಈಟಿವಿ ಭಾರತ'ಕ್ಕೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ ತಿಳಿಸಿದ್ದಾರೆ.
ದುರಂತ ಹಿನ್ನೆಲೆ ಹೆಚ್ಚಾದ ಟ್ರಾಫಿಕ್ ಜಾಮ್: ಹೊರವರ್ತುಲ ರಸ್ತೆಯಾಗಿರುವ ನಾಗವಾರಕ್ಕೆ ಸಂಪರ್ಕಿಸುವ ಹೆಚ್ಬಿಆರ್ ಲೇಔಟ್ ಬಳಿ ಮೆಟ್ರೋ ಪಿಲ್ಲರ್ ರಸ್ತೆ ಮೇಲೆ ಕುಸಿದು ಬೀಳುತ್ತಿದ್ದಂತೆ ಸುಗಮ ಸಂಚಾರಕ್ಕೆ ಅಡಚಣೆಯಾಯಿತು. ಹೀಗಾಗಿ ಕ್ಷಣಾರ್ಧದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಅಲ್ಲದೆ ಸುಮಾರು ಐದಾರು ಕಿಲೋಮಿಟರ್ವರೆಗೂ ಸಂಚಾರ ದಟ್ಟಣೆಯಾಗಿತ್ತು. ಮೆಟ್ರೋ ಕಾರ್ಮಿಕರು ಹಾಗೂ ಸ್ಥಳೀಯರ ನೆರವಿನಿಂದ ಕಬ್ಬಿಣದ ರಾಡ್ಗಳಿರುವ ಮೆಟ್ರೋ ಪಿಲ್ಲರ್ ತೆರವುಗೊಳಿಸಲಾಯಿತು.
ಬಿಎಂಆರ್ಸಿಎಲ್ ನಿರ್ಲಕ್ಷ್ಯಕ್ಕೆ ಎರಡು ಅಮಾಯಕ ಜೀವ ಬಲಿ?: ಪಿಲ್ಲರ್ ನಿರ್ಮಾಣ ಕಾರ್ಯ ಪೂರ್ಣವಾಗಿರಲಿಲ್ಲ. ಅದಕ್ಕೂ ಮುನ್ನ ಕಬ್ಬಿಣದ ಸರಳುಗಳನ್ನು ನಿಲ್ಲಿಸಲಾಗಿತ್ತು. ಈ ಸರಳುಗಳಿಗೆ ಸಪೋರ್ಟಿಂಗ್ ಕಂಬಿ ನೀಡದೇ ಬಿಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮೆಟ್ರೋ ಅಜಾಗರೂಕತೆಗೆ ಎರಡು ಅಮಾಯಕ ಜೀವ ಬಲಿಯಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿರುವ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಹಾಗೂ ಡಿಸಿಪಿ ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೊಟ್ಟಿಗೆರೆಯಿಂದ ಏರ್ ಪೋರ್ಟ್ ರಸ್ತೆವರೆಗೂ ನಿರ್ಮಾಣವಾಗುತ್ತಿರುವ ಮೆಟ್ರೊ ಪ್ರಾಜೆಕ್ಟ್ ಇದಾಗಿದ್ದು, ಪಿಲ್ಲರ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದಿದ್ದಾರೆ.
(ಇದನ್ನೂ ಓದಿ: ಮೆಟ್ರೋ ಹಳಿ ಮೇಲೆ ಬಿದ್ದ ವೈದ್ಯಕೀಯ ಸಾಮಗ್ರಿ ಹೊತ್ತೊಯ್ಯುತ್ತಿದ್ದ ಡ್ರೋನ್ )