ಬೆಂಗಳೂರು: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ವಿಭಾಗದ ಪೊಲೀಸರ ಮುಂದೆ ಆರೋಪ ಎದುರಿಸುತ್ತಿರುವ ಐವರು ಅಧಿಕಾರಿಗಳು ವಿಚಾರಣೆಗೆ ಹಾಜರಾಗಿದ್ದಾರೆ. ಮೆಟ್ರೊ ಪಿಲ್ಲರ್ ಉರುಳಿಬಿದ್ದು ತಾಯಿ ಮತ್ತು ಮಗು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸೈಟ್ ಇಂಜಿನಿಯರ್, ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಬಿಎಂಆರ್ಸಿಎಲ್ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದರು.
ಪೊಲೀಸ್ ನೋಟಿಸ್ ಬಂದಾಕ್ಷಣ ಐವರು ಬಿಎಂಆರ್ಸಿಎಲ್ ಅಧಿಕಾರಿಗಳು ಗೋವಿಂದಪುರ, ಬಾಣಸವಾಡಿ, ಕೆಜಿ ಹಳ್ಳಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ನಾಗಾರ್ಜುನಾ ಕನ್ಸ್ಟ್ರಕ್ಷನ್ ಕಂಪನಿಯ ಪ್ರಭಾಕರ್, ವಿಕಾಸ್ ಸಿಂಗ್, ಲಕ್ಷ್ಮೀಪತಿ, ಬಿಎಂಆರ್ಸಿಎಲ್ ಡೆಪ್ಯೂಟಿ ಚೀಫ್ ವೆಂಕಟೇಶ್ ಶೆಟ್ಟಿ, ಎಕ್ಸಿಕ್ಯೂಟಿವ್ ಎಂಜಿನಿಯರ್ ಮಹೇಶ್ ಬೆಂಡೆಕರಿ ಎಂಬುವವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ನಿನ್ನೆ ನಾಗವಾರ ಬಳಿ ನಡೆಯುತ್ತಿದ್ದ ಮೆಟ್ರೋ ಯೋಜನೆಯ ಜವಾಬ್ದಾರಿ ಹೊಂದಿದ್ದ ಪ್ರಭಾವಿ ಉಪ ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸೈಟ್ ಇಂಜನೀಯರ್ ಅಮಾನತು ಮಾಡಿ ಬಿಎಂಆರ್ಸಿಎಲ್ ಮಹತ್ವದ ಕ್ರಮ ಕೈಗೊಂಡಿತ್ತು.
ಮೆಟ್ರೋ ಪಿಲ್ಲರ್ ಕುಸಿದು ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಆರ್ಸಿಎಲ್ ಕ್ರಮ ಕೈಗೊಂಡಿದ್ದು ಪ್ರಭಾವಿ ಉಪ ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸೈಟ್ ಇಂಜಿನಿಯರ್ ಅಮಾನತು ಮಾಡಲಾಗಿತ್ತು. ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಲಿಮಿಟೆಡ್ (BMRCL) ಈ ವಿಷಯವನ್ನು ಸ್ವತಂತ್ರವಾಗಿ ತನಿಖೆ ಮಾಡಲು ಮತ್ತು ವರದಿ ನೀಡಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಗೆ (IISc) ಗೆ ಮನವಿ ಮಾಡಿದೆ.
ಬೈಕ್ನಲ್ಲಿ ಮಕ್ಕಳನ್ನು ಶಿಶು ವಿಹಾರಕ್ಕೆ ಬಿಡಲು ತೆರಳುತ್ತಿದ್ದವರ ಮೇಲೆ ಬೆಂಗಳೂರು ನಮ್ಮ ಮೆಟ್ರೋ ರೈಲು ಯೋಜನೆಯ ನಿರ್ಮಾಣ ಹಂತದ ಕಬ್ಬಿಣದ ಪಿಲ್ಲರ್ ಕುಸಿದು ಬಿದ್ದಿತ್ತು. ಕಳೆದ ಮಂಗಳವಾರ ಬೆಳಗ್ಗೆ 10:30 ಸುಮಾರಿಗೆ ಈ ದುರ್ಘಟನೆ ಸಂಭವಿಸಿತ್ತು. ಈ ಘಟನೆಯಲ್ಲಿ ತಾಯಿ -ಮಗ ಸಾವನ್ನಪ್ಪಿದ್ದು, ತಂದೆ ಮಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಮನವೊಲಿಕೆ ಬಳಿಕ ಮೃತದೇಹ ಸ್ವೀಕರಿಸಿದ ಕುಟುಂಬಸ್ಥರು: ಘಟನೆಯಲ್ಲಿ ಸಾವನ್ನಪ್ಪಿದ ತೇಜಸ್ವಿನಿ ಅವರ ಶವ ಸ್ವೀಕರಿಸುವ ಮುನ್ನ ಆಕೆಯ ಪತಿ ಹಾಗೂ ಪೋಷಕರು ಪ್ರತಿಭಟಿಸಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರಿಸುವ ಮುನ್ನ ತೇಜಸ್ವಿನಿ ತಂದೆ ಹಾಗೂ ಪತಿ ತಮ್ಮ ಆಕ್ರೋಶ ಹೊರಹಾಕಿದ್ದರು. ಅಷ್ಟೇ ಅಲ್ಲದೇ ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ಮೃತದೇಹ ಸ್ವೀಕರಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಪೊಲೀಸರ ಮನವೊಲಿಕೆ ಬಳಿಕ ತೇಜಸ್ವಿನಿ ಕುಟುಂಬಸ್ಥರು ಮೃತದೇಹವನ್ನು ಪಡೆದಿದ್ದರು.
ತಾಯಿ-ಮಗುವಿನ ಅಂತ್ಯಕ್ರಿಯೆ: ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ಮೃತಪಟ್ಟ ತಾಯಿ ಮತ್ತು ಮಗುವಿನ ಅಂತ್ಯಕ್ರಿಯೆಯನ್ನು ದಾವಣಗೆರೆಯಲ್ಲಿ ನಡೆಸಲಾಗಿದೆ. ತೇಜಸ್ವಿನಿ ಅವರ ಮೃತದೇಹದ ಅಂತ್ಯಕ್ರಿಯೆಯನ್ನು ನಗರದ ವೈಕುಂಠ ಏಕಧಾಮದಲ್ಲಿ ನಡೆಸಲಾಗಿದ್ದು, ಮಗು ವಿಹಾನ್ ಶಾಮನೂರು ರಸ್ತೆಯಲ್ಲಿನ ಬಾಟಲ್ ಬಿಲ್ಡಿಂಗ್ ಹಿಂಭಾಗದ ರುದ್ರಭೂಮಿಯಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ವಿಧಿವಿಧಾನದಂತೆ ನಡೆಸಲಾಗಿದೆ. ಈ ವೇಳೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ದುರಂತ: ಮೂವರು ಇಂಜಿನಿಯರ್ಗಳು ಸಸ್ಪೆಂಡ್.. ತನಿಖೆ ನಡೆಸಿ ವರದಿ ನೀಡಲು ಐಐಎಸ್ಸಿಗೆ ಮನವಿ