ಬೆಂಗಳೂರು: ಚುನಾವಣಾ ಆಯೋಗ ರಾಜ್ಯ ವಿಧಾನಸಭೆ ಚುನಾವಣಾ ದಿನಾಂಕ ನಿಗದಿಗೆ ಸಜ್ಜಾಗುತ್ತಿದ್ದು, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಲು ಮುಂದಾಗಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಈಗಾಗಲೇ ಪೂರ್ವ ತಯಾರಿ ಆರಂಭಿಸಿದೆ. ಚುನಾವಣೆ ಸಂಬಂಧ ಪೂರ್ವ ತಯಾರಿಗಳನ್ನು ಪ್ರಾರಂಭಿಸಿದೆ. ಇದೀಗ ಮಾ.9ರಂದು ಭಾರತ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ -2023ರ ಸಿದ್ಧತೆಯನ್ನು ಪರಿಶೀಲಿಸಲು ರಾಜ್ಯಕ್ಕೆ ಭೇಟಿ ನೀಡುತ್ತಿದೆ.
ಭಾರತ ಚುನಾವಣಾ ಆಯೋಗ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಜೊತೆ ಮಾ.9 ರಂದು ಸಭೆ ಕರೆದಿದೆ. ವಿಕಾಸ ಸೌಧದದಲ್ಲಿ ರಾಜಕೀಯ ಪಕ್ಷಗಳ ಜೊತೆ ಮಾ.9ರಂದು ಸಭೆಯನ್ನು ಕರೆಯಲಾಗಿದೆ. ಸಭೆಗೆ ಆಯಾ ಪಕ್ಷಗಳ ಪ್ರತಿನಿಧಿಗಳನ್ನು ಕಳುಹಿಸಿಕೊಡುವಂತೆ ಕೋರಿದೆ. ಮಧ್ಯಾಹ್ನ 2.30-2.40ಗೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಜೊತೆ ಸಭೆ ನಿಗದಿಯಾಗಿದೆ. 2.40-2.50ಗೆ ಬಿಎಸ್ಪಿ ಜೊತೆ ಸಭೆ ನಡೆಯಲಿದೆ. 2.50-3 ಗಟೆವರೆಗೆ ಬಿಜೆಪಿ ಪಕ್ಷದ ಜೊತೆ ಚುನಾವಣಾ ಆಯೋಗ ಸಭೆ ನಡೆಸಲಿದೆ. ಸಿಪಿಐ ಜೊತೆ 3.00-3.10 ಗೆ ಸಭೆ ನಡೆಸಲಿದ್ದಾರೆ.
ಏಪ್ರಿಲ್ ತಿಂಗಳ ಬಳಿಕ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ: ಇನ್ನು 3.10-03.20ವರೆಗೆ ಸಿಪಿಐ(ಎಂ) ಜೊತೆ ಸಭೆ ನಿಗದಿಯಾಗಿದೆ. ಕಾಂಗ್ರೆಸ್ ಪಕ್ಷದ ಜೊತೆ 3.20-3.30 ವರೆಗೆ ಸಭೆ ನಡೆಸಲಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಜೊತೆ 3.30-3.40 ವರೆಗೆ ಚುನಾವಣಾ ಆಯೋಗ ಸಭೆ ನಡೆಸಿ ಚರ್ಚೆ ನಡೆಸಲಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ ಜೊತೆ 3.40-3.50 ವರೆಗೆ ಸಭೆ ನಡೆಸಲಿದೆ. ಜೆಡಿಎಸ್ ಜೊತೆ 3.50-4 ಗಂಟೆವರೆಗೆ ಸಭೆ ನಡೆಸಲಿದ್ದಾರೆ. ಮಾರ್ಚ್ ಅಂತ್ಯಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದ್ದು, ಇದಕ್ಕೂ ಮುನ್ನ ರಾಜ್ಯದ ಎಲ್ಲಾ ಅಧಿಕೃತ ರಾಜಕೀಯ ಪಕ್ಷಗಳ ಜೊತೆ ಚುಮಾವಣಾ ಆಯೋಗ ಸಭೆ ನಡೆಸಿ ಸಲಹೆ ಅಭಿಪ್ರಾಯಗಳನ್ನು ಪಡೆಯಲಿದೆ. ಏಪ್ರಿಲ್ ತಿಂಗಳ ಬಳಿಕ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ, ತಿಂಗಳಾಂತ್ಯದೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಎಂ ವೀರಪ್ಪ ಮೊಯ್ಲಿ
ಇದೇ ತಿಂಗಳು ಚುನಾವಣಾ ದಿನಾಂಕ ಘೋಷಣೆ ಎಂದಿದ್ದ ಹೆಚ್ ಡಿ. ಕುಮಾರಸ್ವಾಮಿ: ಚುನಾವಣೆಗೆ ಅಧಿಕೃತ ದಿನಾಂಕ ಪ್ರಕಟಣೆ ಸಮೀಪ ಬಂದಿದೆ, ಇದೆ ತಿಂಗಳ 20 ರಿಂದ 30ನೇ ತಾರೀಖಿನ ಒಳಗೆ ಚುನಾವಣಾ ದಿನಾಂಕ ಘೋಷಣೆ ಆಗಬಹುದು, ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ಮೈಸೂರಿನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಈ ತಿಂಗಳು 20 ರಿಂದ 30 ನೇ ತಾರೀಖಿನೊಳಗೆ ಚುನಾವಣೆ ದಿನಾಂಕ ಘೋಷಣೆ ಆಗಬಹುದು. ನಮ್ಮ ಪಕ್ಷವನ್ನು ಐಸಿಯುನಲ್ಲಿ ಇದೆ ಎಂದು ಹೇಳುತ್ತಿದ್ದ ಜನರು, ಈಗ ನಮ್ಮ ಪಂಚರತ್ನ ಯಾತ್ರೆಯಲ್ಲಿ ಬರುತ್ತಿರುವ ಜನ ಸಮೂಹವನ್ನು ನೋಡಿ, ಅವರು ಯಾತ್ರೆಗಳನ್ನ ಮಾಡುತ್ತಿದ್ದಾರೆ. ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಎಂದು, ಏತಕ್ಕೆ ಹೆಸರನ್ನು ಇಟ್ಟಿದ್ದಾರೊ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದರು.