ಬೆಂಗಳೂರು: ಜ. 11ಕ್ಕೆ ದೆಹಲಿಗೆ ಕ್ಷೇತ್ರವಾರು ಅಭ್ಯರ್ಥಿಗಳ ಮಾಹಿತಿ ತೆಗೆದುಕೊಂಡು ಬರುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಸಚಿವರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, "ಜನವರಿ 11 ರಂದು ನಮ್ಮ 28 ಸಂಯೋಜಕರನ್ನು ದೆಹಲಿಗೆ ಕರೆದಿದ್ದು, ಕ್ಷೇತ್ರಗಳ ಮಾಹಿತಿ ತೆಗೆದುಕೊಂಡು ಬರುವಂತೆ ಹೇಳಿದ್ದಾರೆ. 29 ಕ್ಷೇತ್ರಗಳನ್ನು ಸಚಿವರಿಗೆ ಉಸ್ತುವಾರಿ ನೀಡಿದ್ದಾರೆ. ನಮ್ಮ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ನಾವು ತಿಳಿಸುತ್ತೇವೆ. ಆ ಸಮಯದಲ್ಲಿ ನಮ್ಮ ಜವಾಬ್ದಾರಿ ಏನು ಎಂಬುವುದನ್ನು ತಿಳಿಸುತ್ತಾರೆ" ಎಂದು ತಿಳಿಸಿದರು.
"ಪಿಸಿಸಿಯಿಂದಲೂ ಅಭ್ಯರ್ಥಿಗಳ ಹೆಸರು ಕಳುಹಿಸಲಾಗುತ್ತದೆ. ಅಂತಿಮವಾಗಿ ಹೈಕಮಾಂಡ್ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡುತ್ತದೆ. ಆದಷ್ಟು ಬೇಗ ಅಭ್ಯರ್ಥಿಗಳ ಲಿಸ್ಟ್ ನೀಡಲು ಹೇಳಿದ್ದೇವೆ. ಅದರಲ್ಲೂ ಮೊದಲ ಲಿಸ್ಟ್ ಬೇಗ ಬಿಡುಗಡೆ ಮಾಡಿದರೆ ಅಭ್ಯರ್ಥಿಗಳು ಓಡಾಟ ಶುರು ಮಾಡುತ್ತಾರೆ. ನಾವು ಕೂಡ ಅವರಿಗೆ ಕ್ಷೇತ್ರದಲ್ಲಿ ಓಡಾಡಿ, ಪ್ರಚಾರ ಮಾಡುವಂತೆ ಹೇಳುತ್ತೇವೆ. ಪ್ರಚಾರ ಸಭೆ, ಸಮಾರಂಭಗಳನ್ನು ಮಾಡುತ್ತೇವೆ" ಎಂದರು.
ಮೂವರು ಡಿಸಿಎಂಗಳ ಆಯ್ಕೆ ಕುರಿತು ಪ್ರತಿಕ್ರಿಯಿಸಿ, "ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಎಲ್ಲ ಮಂತ್ರಿಗಳನ್ನೂ ಸಭೆಗೆ ಕರೆದಿದ್ದರು. ಕೆಲವರು ಮೂರು ಡಿಸಿಎಂ ಆಯ್ಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸುರ್ಜೇವಾಲ ಅವರು, ನೀವೆಲ್ಲಾ ಹಿರಿಯರಿದ್ದೀರಿ. ಗಂಭೀರವಾಗಿ ಯಾವ ರೀತಿ ಮಾಡಬೇಕು ಅಂತ ಕೇಳಿದ್ರು. ಜೊತೆಗೆ ಸಲಹೆಯನ್ನೂ ಕೊಟ್ಟಿದ್ದಾರೆ. ಸಲಹೆಗಳನ್ನು ಸ್ವೀಕರಿಸುವುದು ಹೈಕಮಾಂಡ್ಗೆ ಬಿಟ್ಟಿದ್ದು. ಸಾಧಕ ಬಾಧಕ ನೋಡಿ ಹೈಕಮಾಂಡ್ ತೀರ್ಮಾನಿಸುತ್ತೆ. ಇದು ಪಕ್ಷದ ಆಂತರಿಕ ವಿಚಾರ. ಹೈಕಮಾಂಡ್ ಇದ್ದು, ತೀರ್ಮಾನ ಮಾಡುತ್ತದೆ. ಈ ಬಗ್ಗೆ ಹೈಕಮಾಂಡ್ನಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ನಾನು ಎರಡು ಬಾರಿ ಅಧ್ಯಕ್ಷನಾಗಿದ್ದೆ. ಎರಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಈ ಬಗ್ಗೆ ಒಂದಿಷ್ಟು ಸಲಹೆ ಕೊಟ್ಟಿದ್ದೇನೆ" ಎಂದರು.
ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿ, "ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಆಕಸ್ಮಾತ್ ಅಂತಹ ಪರಿಸ್ಥಿತಿ ಬಂದರೆ, ಸಚಿವರು ಚುನಾವಣೆಗೆ ನಿಲ್ಲಬೇಕಾಗುತ್ತೆ" ಎಂದು ಕಳೆದ ಬಾರಿ ಕೃಷ್ಣ ಬೈರೇಗೌಡರು ಚುನಾವಣೆಗೆ ಸ್ಪರ್ಧಿಸಿದ್ದನ್ನು ಉದಾಹರಣೆ ಕೊಟ್ಟರು.
ಇದೇ ಜ.26 ರಂದು ದೆಹಲಿಯಲ್ಲಿರುವ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭಕ್ಕೆ ರಾಜ್ಯದ ಟ್ಯಾಬ್ಲೊ ಕಡೆಗಣನೆ ಕುರಿತು ಪ್ರತಿಕ್ರಿಯಿಸಿ, "ಸರ್ಕಾರಕ್ಕೆ ತನ್ನದೇ ಆದ ತೀರ್ಮಾನ ಇರುತ್ತದೆ. ಯಾವ ಟ್ಯಾಬ್ಲೊ ಕಳುಹಿಸಬೇಕು. ಇಡೀ ದೇಶದಲ್ಲಿ ಕರ್ನಾಟಕದ ಬಗ್ಗೆ ಗೊತ್ತಾಗಬೇಕು. ಇದನ್ನು ಸರ್ಕಾರ ನಿರ್ಧರಿಸುತ್ತದೆ. ಗೈಡ್ಲೈನ್ಗಳನ್ನೂ ಪಾಲಿಸುತ್ತೇವೆ' ಎಂದರು.
ಇದನ್ನೂ ಓದಿ: ನೂತನ ಅಗ್ನಿಶಾಮಕ ಠಾಣೆ ನಿರ್ಮಾಣ ಹಾಗೂ ವಿವಿಧ ಠಾಣೆಗಳ ಉನ್ನತೀಕರಣಕ್ಕೆ ಸರ್ಕಾರ ನಿರ್ಧಾರ