ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಆರೋಗ್ಯ ಹಾಗೂ ವೈದ್ಯಕೀಯ ಇಲಾಖೆಗಳು ಸೋಂಕು ಹತೋಟಿಗೆ ವಿನಿಯೋಗಿಸಲು ಸುಮಾರು 500 ಕೋಟಿ ರೂಪಾಯಿಗೆ ಅನುಮೋದನೆ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ನಡೆದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಮೆಡಿಕಲ್ ಕಾಲೇಜುಗಳಲ್ಲಿ ಆರ್ಟಿಪಿಸಿಆರ್ ಉನ್ನತಿಗೊಳಿಸಲು ತೀರ್ಮಾನಿಸಲಾಗಿದೆ. ಇದರಿಂದ ಟೆಸ್ಟ್ಗಳ ಸಂಖ್ಯೆ ಹೆಚ್ಚುತ್ತದೆ ಎಂದರು. ಹೊಸ ಹೊಸ ಔಷಧಿಗಳು ಬರುತ್ತಿವೆ. ಯಾವುದನ್ನು ಕೊಡಬೇಕು ಅನ್ನುವುದರ ಬಗ್ಗೆ ಹಾಗೂ ಐಸಿಯುನಲ್ಲಿ ಬೆಡ್ ಹೆಚ್ಚಿಸುವುದು ಸೇರಿ ಹಲವು ವಿಚಾರಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ.
35 ಲಕ್ಷ ಮಾಸ್ಕ್ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಈಗಾಗಲೇ ಒಂದು ಲಕ್ಷ ಆ್ಯಂಟಿಜೆನ್ ಟೆಸ್ಟ್ ಕಿಟ್ ತರಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಇನ್ನೂ 4 ಲಕ್ಷ ಕಿಟ್‌ಗಳನ್ನು ತರಿಸಲಾಗಿದೆ. ಕೊರೊನಾ ಪ್ರಥಮ ಹಂತದಲ್ಲಿರುವವರಿಗೆ ರೆಮಿಷನ್ ಸಿಬಿ ಔಷಧಿ ನೀಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಸರ್ಕಾರದಿಂದ ಖಾಸಗಿ ಲ್ಯಾಬ್ಗಳಲ್ಲಿ ಟೆಸ್ಟ್ ಮಾಡಿಸುವುದಕ್ಕೆ 2,200 ರೂ.ನಿಂದ 2 ಸಾವಿರ ರೂ.ಗೆ ಇಳಿಕೆ ಮಾಡಲಾಗಿದೆ. ಅದೇ ರೀತಿ ಖಾಸಗಿಯಾಗಿ ಟೆಸ್ಟ್ ಮಾಡಿಸಿಕೊಳ್ಳುವವರಿಗೆ 4 ಸಾವಿರ ರೂ.ನಿಂದ 3 ಸಾವಿರ ರೂ.ಗೆ ಇಳಿಸಲಾಗಿದೆ. ಇದನ್ನು ಬಿಟ್ಟು ಪಿಪಿಇ ಕಿಟ್ ಅಂತೆಲ್ಲಾ ಹಣ ಹಾಕಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ 2 ಸಾವಿರ ರೂ. ನಿಗದಿಪಡಿಸಲಾಗಿದೆ ಎಂದರು.
ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್ಗಳನ್ನು ಸರ್ಕಾರಕ್ಕೆ ಕೊಡಬೇಕು. ಉಳಿದ ಬೆಡ್ಗಳನ್ನು ಬೇರೆ ಬೇರೆ ವಿಭಾಗಗಳಿಗೆ ನೀಡಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ನಿರ್ಧಾರ ಮಾಡಲಾಗಿದೆ ಎಂದರು.