ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದ್ದು, ಸರ್ಕಾರದ ಆದೇಶದನ್ವಯ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಡುವ ಸಂಬಂಧ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಆಸ್ಪತ್ರೆ ಹಾಸಿಗೆ ನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ಗುರುವಾರ ನಡೆದ ವರ್ಚುವಲ್ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯ ಹೆಚ್ಚಳವು ಜನರಲ್ಲಿ ಭಯವನ್ನುಂಟು ಮಾಡಬಹುದು. ಆದರೆ ಯಾರೊಬ್ಬರೂ ಭಯಪಡುವ ಅವಶ್ಯಕತೆಯಿಲ್ಲ. ಸರ್ಕಾರದ ಆದೇಶದನ್ವಯ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ರೀತಿಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಿಕೊಂಡಲ್ಲಿ ಪರಿಸ್ಥಿತಿ ನಿಭಾಯಿಸಬಹುದು ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಕೋವಿಡ್ ಹೊಸ ಮಾರ್ಗಸೂಚಿ ಜಾರಿ: ಯಾವುದಕ್ಕೆಲ್ಲಾ ನಿರ್ಬಂಧ?
ನಗರದಲ್ಲಿ ಪ್ರತಿನಿತ್ಯ ಸುಮಾರು 60 ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆಸ್ಪತ್ರೆಗಳಿಗೆ ದಾಖಲಾಗುವವರ ಪ್ರಮಾಣ ಪ್ರತಿನಿತ್ಯ 20 ರಿಂದ 60ಕ್ಕೆ ಏರಿಕೆಯಾಗಿದ್ದು, ಸೋಂಕಿತ ವ್ಯಕ್ತಿ ಯಾವುದೇ ಭಯಪಡುವ ಅವಶ್ಯಕತೆಯಿಲ್ಲ. ಪಾಲಿಕೆಯ ಟೆಲಿ ಟ್ರಯಾಜಿಂಗ್ ತಂಡ ಹಾಗೂ ಆಯಾ ವಾರ್ಡ್ ವ್ಯಾಪ್ತಿಯಲ್ಲಿರುವ ಮೊಬೈಲ್ ಟ್ರಯಾಜಿಂಗ್ ತಂಡವು ಸೋಂಕಿತ ವ್ಯಕ್ತಿಯ ಆರೋಗ್ಯ ಪರಿಸ್ಥಿತಿ ಅವಲೋಕಿಸಲಿದೆ. ಆಸ್ಪತ್ರೆಯ ಅವಶ್ಯಕತೆ ಇರುವವರನ್ನು ಮಾತ್ರ ದಾಖಲಿಸಿ, ಉಳಿದವರಿಗೆ ಮನೆಯಲ್ಲೇ ಪ್ರತ್ಯೇಕವಾಗಿರುವ ಮೂಲಕ ಚಿಕಿತ್ಸೆ ಪಡೆಯಲು ತಿಳಿಸಬೇಕು ಎಂದು ಹೇಳಿದರು.