ಬೆಂಗಳೂರು: ಎರಡ್ಮೂರು ವರ್ಷಗಳಾದ್ರೂ ಬಿಬಿಎಂಪಿ ಶಾಲೆಗೆ ಕೊಟ್ಟಿರೋ ಫುಟ್ಬಾಲ್, ಶಟಲ್ ಬ್ಯಾಟ್ಗಳ ಪ್ಯಾಕೇಟ್ ಕೂಡಾ ತೆಗೆಯದೆ ಕಬಾರ್ಡ್ನಲ್ಲಿ ಹಾಗೇ ಇಟ್ಟಿದ್ದಕ್ಕೆ ಗರಂ ಆದ ಮೇಯರ್, ಅರಶಿನ, ಕುಂಕುಮ ಹಚ್ಚಿ ಪೂಜೆ ಮಾಡಿ ಎಂದು ಶಾಲಾ ಪ್ರಾಂಶುಪಾಲರಿಗೆ ಮೇಯರ್ ಗಂಗಾಂಬಿಕೆ ಕ್ಲಾಸ್ ತಗೊಂಡ್ರು.
ಇಂದು ಸುಮಾರು ಆರು ನೂರು ವಿದ್ಯಾರ್ಥಿಗಳಿರುವ ಮತ್ತಿಕೆರೆಯ ಬಿಬಿಎಂಪಿ ಬಾಲಕಿಯರ ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಈ ವೇಳೆ ಶಾಲೆಯ ಕಳಪೆ ನಿರ್ವಹಣೆಗೆ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರ ಮೇಲೆ ಗರಂ ಆದ್ರು.
ಈ ಶಾಲೆಯಲ್ಲಿ ವಾಟರ್ ಫಿಲ್ಟರ್ಗೆ 64 ಲಕ್ಷ, ಫರ್ನಿಚರ್ಗೆ ಒಂದು ಕೋಟಿ 85 ಲಕ್ಷ ಹಾಗೂ ಕಂಪ್ಯೂಟರ್ ಟ್ಯಾಲಿ ಹೇಳಿಕೊಡಲು ಅಂತ ಎರಡು ಕೋಟಿ ರೂಪಾಯಿಗಳ ಬಿಲ್ ಆಗಿತ್ತು. ಆದ್ರೆ ಕ್ಲಾಸ್ ಮಾತ್ರ ನಡೆದಿರಲಿಲ್ಲ. ಕ್ಲಾಸ್ ಮಾಡದೆಯೂ ಬಿಲ್ ಪಾವತಿಗೆ ಸಹಿ ಮಾಡಿದ್ದಕ್ಕೆ ಎಜುಕೇಷನ್ ಆಫೀಸರ್ಗೆ ಮೇಯರ್ ಕ್ಲಾಸ್ ತಗೊಂಡ್ರು. ಮಕ್ಕಳಿಗೆ ಕಳಪೆ ಗುಣಮಟ್ಟದ ಬ್ಯಾಗ್ ನೀಡಿದ್ದಾರೆ. ಸ್ಕೂಲ್ ಆರಂಭವಾಗಿ ಒಂದೂವರೆ ತಿಂಗಳಾದ್ರು ಬುಕ್ಸ್ , ಯೂನಿಫಾರಂ ಕೊಟ್ಟಿಲ್ಲ. ಆದಷ್ಟು ಬೇಗ ಕೊಡುವಂತೆ ಸೂಚಿಸಿದ್ರು.
ಜೊತೆಗೆ 40 ಲಕ್ಷ ವೆಚ್ಚದಲ್ಲಿ ಶಾಲೆಯ ಅಭಿವೃದ್ಧಿಗೆ ಆದೇಶ ಮಾಡಿದ್ರು. ಎರಡು ಕ್ಲಾಸ್ ರೂಂ ನಿರ್ಮಾಣ, ಗ್ರಂಥಾಲಯ ನಿರ್ವಹಣೆಗೆ ಸೂಚಿಸಿದರು. ಪ್ರತೀ ಹದಿನೈದು ದಿನಕ್ಕೆ ಕಡ್ಡಾಯವಾಗಿ ಶಾಲೆಗಳನ್ನು ವಿಸಿಟ್ ಮಾಡಿ ಪರಿಶೀಲನೆ ನಡೆಸ್ಬೇಕು ಎಂದರು. ಆದ್ರೆ ಶಿಕ್ಷಣ ಅಧಿಕಾರಿ ಹರೀಶ್ ಅವ್ರನ್ನ ಕೇಳಿದ್ರೆ ಮಹಾನಗರ ಪಾಲಿಕೆಯ ಬಳಿ ಸಿಬ್ಬಂದಿಯೇ ಇಲ್ಲ. ಒಬ್ಬರೇ 158 ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿಲು ಸಾಧ್ಯವಿಲ್ಲ. ದಯವಿಟ್ಟು ಸಿಬ್ಬಂದಿ ಕೊಡಲಿ ಎಂದು ಅಳಲು ತೋಡಿಕೊಂಡರು.