ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು, ಜನರು ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ತಿಳಿಯಲು ಪ್ರತ್ಯೇಕ ಮಾರ್ಷಲ್ ತಂಡವೊಂದನ್ನು ರಚನೆ ಮಾಡಲಾಗಿದೆ.
ಈ ಕುರಿತು ರಾಜ್ಯ ಮಿನರಲ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕ ನವೀನ್ ರಾಜ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ವಿಶೇಷ ಆಯುಕ್ತ ರಂದೀಪ್, ಜಂಟಿ ಆಯುಕ್ತ ಸರ್ಫರಾಜ್ ಖಾನ್ ಕೂಡಾ ಭಾಗಿಯಾಗಿದ್ದರು.
ಸಭೆ ಕುರಿತು ಮಾಹಿತಿ ನೀಡಿದ ಅವರು, 8 ವಲಯಗಳಲ್ಲಿ ತಲಾ 5 ಜನರನ್ನು ಒಳಗೊಂಡ ಮಾರ್ಷಲ್ಗಳ ತಂಡ ಹಾಗೂ ಆರೋಗ್ಯಾಧಿಕಾರಿಗಳ ಕಣ್ಗಾವಲು ತಂಡ ರಚಿಸಲಾಗುವುದು. ದೈಹಿಕ ಅಂತರ ಕಾಪಾಡದಿದ್ದರೆ, ಮಾಸ್ಕ್ ಧರಿಸದಿದ್ದರೆ 200 ರೂಪಾಯಿ ದಂಡ ಹಾಗೂ ಹೋಟೆಲ್ ರೆಸ್ಟೋರೆಂಟ್ ಮಾಲೀಕರ ಮೇಲೂ ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ. ಇದಕ್ಕಾಗಿ ಪ್ರತಿ ವಲಯಕ್ಕೆ ಒಂದು ಪಹರೆ ವಾಹನ ವ್ಯವಸ್ಥೆ ಕೂಡಾ ಮಾಡಲು ನಿರ್ಧರಿಸಲಾಗಿದೆ.