ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಗೆ ಕೊರೊನಾ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಣಿಪಾಲ್ ಆಸ್ಪತ್ರೆಯ ಆರೋಗ್ಯ ಮಾಹಿತಿಯಲ್ಲಿ ಈ ವಿವರ ನೀಡಲಾಗಿದ್ದು, ಸಿದ್ದರಾಮಯ್ಯ ಅವರು ಆ.3 ರಂದು ಮಣಿಪಾಲ್ ಆಸ್ಪತ್ರೆಗಳಿಗೆ ದಾಖಲಾದ ನಂತರ ಪ್ರಾಯೋಗಿಕವಾಗಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿ ಮುಂದುವರೆದಿದೆ. ಅವರು ಸಾಕಷ್ಟು ಆರೋಗ್ಯವಂತರಾಗಿದ್ದು, ಹರ್ಷಚಿತ್ತರಾಗಿದ್ದಾರೆ. ಅವರನ್ನು ನಮ್ಮ ವೈದ್ಯರ ತಂಡ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಲಾಗಿದೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಇವರಿಗಿಂತ ಒಂದು ದಿನ ಮುನ್ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಲಿ ಹಾಗೂ ಮಾಜಿ ಸಿಎಂಗಳಿಗೆ ಒಂದೇ ವೈದ್ಯರ ತಂಡ ಕೊರೊನಾಗೆ ಚಿಕಿತ್ಸೆ ನೀಡುತ್ತಿದೆ. ಸಿದ್ದರಾಮಯ್ಯ ಜ್ವರ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ತಪಾಸಣೆಗೆ ಒಳಗಾದ ಸಂದರ್ಭ ಕೊರೊನಾ ಇರುವುದು ದೃಢಪಟ್ಟಿತ್ತು.
ಕಳೆದ ಎರಡು ದಿನದಿಂದ ಇವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.