ಬೆಂಗಳೂರು : ಮಂಗಳೂರಿನ ಘನತ್ಯಾಜ್ಯ ವಿಲೇವಾರಿ ಘಟಕದಿಂದ ಹೊರ ಬರುತ್ತಿರುವ ಕಲುಷಿತ ನೀರು ಫಲ್ಗುಣಿ ನದಿ ಹಾಗೂ ಮರವೂರು ಡ್ಯಾಂಗೆ ಸೇರುತ್ತಿರುವುದನ್ನು ತಡೆಗಟ್ಟಲು ಯಾವುದೇ ಕ್ರಮಕೈಗೊಳ್ಳದ ಮಂಗಳೂರಿನ ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ಘನತ್ಯಾಜ್ಯ ಭೂಭರ್ತಿ ಘಟಕ ಕುಸಿತದಿಂದ ಆಗಿರುವ ಅನಾಹುತಗಳ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪಾಲಿಸದ ಮಂಗಳೂರು ಪಾಲಿಕೆ ಹಾಗೂ ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದಿಸಿ, ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಹೊರ ಬರುತ್ತಿರುವ ಕಲುಷಿತ ನೀರು ಫಲ್ಗುಣಿ ನದಿ ಹಾಗೂ ಮರವೂರು ಡ್ಯಾಂ ಸೇರುತ್ತಿದೆ. ಹೀಗಾಗಿ, ನದಿ ನೀರು ಸಂಪೂರ್ಣ ಕಲುಷಿತಗೊಂಡಿದೆ.
ಇದೇ ಕಲುಷಿತ ನೀರನ್ನು 13 ಗ್ರಾಮಗಳ ಜನ ಕುಡಿಯುತ್ತಿರುವುದನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿ) ವರದಿಯಲ್ಲಿ ದೃಢಪಡಿಸಿದೆ. ಆದರೆ, ನೀರು ಕಲುಷಿತಗೊಳ್ಳುವುದನ್ನು ತಡೆಯುವಲ್ಲಿ ಬೇಜವಾಬ್ದಾರಿ ತೋರುತ್ತಿರುವ ಪಾಲಿಕೆ ವಿರುದ್ಧ ಕೆಎಸ್‌ಪಿಸಿಬಿಯಾಗಲೀ, ರಾಜ್ಯ ಸರ್ಕಾರವಾಗಲೀ ಕ್ರಮಕೈಗೊಂಡಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಸರ್ಕಾರದ ಪರ ವಕೀಲರು ವಾದಿಸಿ, ಸಮಸ್ಯೆ ಪರಿಹರಿಸಲು ಎಲ್ಲ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಸಾರ್ವಜನಿಕ ಕೆಲಸ ಕಾರ್ಯಗಳನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ಪಾಲಿಕೆಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕೂಡ ಮುಂಚೂಣಿಯಲ್ಲಿದೆ ಎಂದು ಸಮರ್ಥಿಸಿದರು. ಹೇಳಿಕೆಗೆ ಗರಂ ಆದ ಪೀಠ, ಪಾಲಿಕೆ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸುತ್ತಿದ್ದೀರಿ.
ಇದೇ ವೇಳೆ ಜನರು ಕುಡಿಯುವ ನದಿ ನೀರಿಗೆ ಅಪಾಯಕಾರಿ ಕೊಳಚೆ ನೀರು ಹರಿಯುತ್ತಿದೆ. ಇದು ವಿಪರ್ಯಾಸ. ಹೀಗಾಗಿ, ಪಾಲಿಕೆ ಇಂತಹ ಸಮಸ್ಯೆ ಬಗೆಹರಿಸದೆ ಅದ್ಙೇಗೆ ಅತ್ಯುತ್ತವಾಗಿ ಕಾರ್ಯ ನಿರ್ವಹಿಸುತ್ತಿದೆ? ಎಂದು ಕಟುವಾಗಿ ಪ್ರಶ್ನಿಸಿದ ಪೀಠ, ಈ ಕುರಿತು ಸರ್ಕಾರ ದಾಖಲೆ ಸಹಿತ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿತು.
ಅಲ್ಲದೇ, ಪಾಲಿಕೆಯು ಏಪ್ರಿಲ್ 23ರಂದು ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಿಳಿಸಿರುವಂತೆ ಸಮಸ್ಯೆ ಪರಿಹಾರಕ್ಕೆ ಯಾವ್ಯಾವ ದಿನಾಂಕದಲ್ಲಿ ಏನೆಲ್ಲಾ ಕಾರ್ಯ ಪೂರ್ಣಗೊಳಿಸಿದೆ ಎಂಬ ಕುರಿತು ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 26ಕ್ಕೆ ಮುಂದೂಡಿತು.
ಓದಿ: ಸಿಎಂ ಭೇಟಿ ಮಾಡಿ ಉಸ್ತುವಾರಿ ಅರುಣ್ ಸಿಂಗ್, ಕಟೀಲ್ ಚರ್ಚೆ: ಶಾಸಕಾಂಗ ಸಭೆಗೆ ಮುನ್ನ ಮುಖಂಡರ ರೆಸ್ಟ್