ಬೆಂಗಳೂರು: ಪೊಲೀಸರ ಮೇಲೆ ಕಲ್ಲು ತೂರಾಟ, ಗಲಭೆ ಮಾಡಿದವರನ್ನು ಸುಮ್ಮನೆ ಬಿಡಲ್ಲ. ಇದು ಹೇಡಿ ಸರ್ಕಾರವಲ್ಲ, ರಾಜಾಹುಲಿ ಸರ್ಕಾರ ಎಂದು ವಿಧಾನಸಭೆ ಮುಖ್ಯ ಸಚೇತಕ ಸುನೀಲ್ ಕುಮಾರ್ ಗುಡುಗಿದರು.
ಕಾನೂನು ಸುವ್ಯವಸ್ಥೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಖಾದರ್ ಹೇಳಿಕೆಯಿಂದಲೇ ಈ ಗಲಭೆಯಾಗಿದೆ. ಅವರ ಪ್ರಚೋದನಕಾರಿ ಹೇಳಿಕೆಯಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಗಲಭೆಯಾಗಿದೆ. ಪೊಲೀಸರ ಕ್ರಮವನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ. ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಹಾಕಿದವರ ವಿರುದ್ಧ ದಿಟ್ಟ ಕ್ರಮ ಕೈಗೊಂಡಿದ್ದಾರೆ ಎಂದರು.
ಈ ಗಲಭೆಯಲ್ಲಿ ಭಾರಿ ಅನಾಹುತ ತಪ್ಪಿಸಿದ ಪೊಲೀಸರಿಗೆ ಮುಖ್ಯಮಂತ್ರಿಯವರು ಬಹುಮಾನ ಘೋಷಿಸಬೇಕು. ಪ್ರತಿಭಟನೆಗೆ ಪ್ರಚೋದಿಸಿದ ಯು.ಟಿ.ಖಾದರ್ ಮತ್ತು ಅವರ ಗುಂಪಿನ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಪಿಎಫ್ಐ ಸಂಘಟನೆಗಳ ವಿರುದ್ಧ ಹೇಳಿಕೆ ಕೊಟ್ಟರೆ ನಮಗೆ ಸೌದಿಯಿಂದ ಬೆದರಿಕೆ ಕರೆ ಬರುತ್ತದೆ ಎಂದರು.
ಗೋಲಿಬಾರ್ನಲ್ಲಿ ಮೃತನಾದ ಜಲೀಲ್ ಎಂಬ ವ್ಯಕ್ತಿಯ ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಈ ಮುಂಚೆ ಮೊಕದ್ದಮೆ ದಾಖಲಾಗಿದೆ. ಆದರೆ ನೀವು ಅವನನ್ನು ಅಮಾಯಕ ಎಂದು ಹೇಳುತ್ತೀರಾ. ಪಿಎಫ್ಐ ಅಶಾಂತಿ ಉಂಟು ಮಾಡಲು ಮುಂದಾಗಿದೆ. ಮೈಸೂರು, ಬೆಳಗಾವಿಯ ಘಟನೆಗಳಲ್ಲಿ ಪಿಎಫ್ಐ ಪಾತ್ರ ಇತ್ತು. ಇದನ್ನು ಯಾರೂ ಪ್ರಶ್ನೆ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು. ಪೊಲೀಸ್ ಠಾಣೆಯ ನಾಲ್ಕು ದಿಕ್ಕುಗಳಿಂದ ಸುತ್ತುವರಿದರೆ ಅವರು ಅಮಾಯಕರಾ? ಪೆಟ್ರೋಲ್ ಬಾಂಬ್ ಎಸೆಯುವವರು ಅಮಾಯಕರಾ? ಈ ಗಲಭೆಗೆ ಪಿಎಫ್ಐ ಕಾರಣ. ನಾವು ಅವರನ್ನು ಮಟ್ಟ ಹಾಕೋಕೆ ಹೊರಟಿದ್ದೇವೆ. ಆದರೆ ಕಾಂಗ್ರೆಸ್ನವರು ಅವರನ್ನು ಬೆಂಬಲಿಸುತ್ತಿದ್ದೀರಿ ಎಂದು ಆರೋಪಿಸಿದರು.