ಬೆಂಗಳೂರು : ಒಂದು ಕಾಲದಲ್ಲಿ ಭೂಗತ ಲೋಕವನ್ನು ಲೀಡ್ ಮಾಡುತ್ತಿದ್ದ ಪಾತಕಿಗಳನ್ನೆಲ್ಲ ಪೊಲೀಸರು ಹೆಡೆಮುರಿ ಕಟ್ಟುತ್ತಿದ್ದಾರೆ. ಇದೀಗ ಛೋಟಾ ರಾಜನ್, ಬನ್ನಂಜೆ ರಾಜನ್ ಬಲಗೈ ಬಂಟನಾಗಿದ್ದ ಸುರೇಶ್ ಪೂಜಾರಿಯನ್ನು ಇಂಟರ್ ಪೋಲ್ ಪೊಲೀಸರು ಫಿಲಿಪೈನ್ಸ್ನಲ್ಲಿ ಬಂಧಿಸಿದ್ದಾರೆ.
ಹಲವಾರು ವರ್ಷಗಳ ಹಿಂದೆ ಮಂಗಳೂರು ಮೂಲದ ಸುರೇಶ್ ಪೂಜಾರಿ ಬಾಂಬೆ ಭೂಗತ ಜಗತ್ತಿಗೆ ಕಾಲಿಟ್ಟಿದ್ದ. ಹೀಗೆ ಮುಂಬೈಗೆ ಹೊರಟವನು ಮೊದಲಿಗೆ ಛೋಟಾ ರಾಜನ್ ಬಳಿ ಶಿಷ್ಯನಾಗಿ ಸೇರಿಕೊಂಡ. ಆಗ ಛೋಟಾ ರಾಜನ್ಗೆ ಸಂಬಂಧಿಸಿದ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ.
1992ರ ಮುಂಬೈ ಬಾಂಬ್ ಸರಣಿ ಸ್ಫೋಟದ ನಂತರ ಬಾಂಬೆ ಡಾನ್ಗಳೆಲ್ಲ ವಿದೇಶಕ್ಕೆ ಶಿಫ್ಟ್ ಆದ್ರು. ಆಗಲೂ ಇವನು ಛೋಟಾ ರಾಜನ್ ಜತೆಯಲ್ಲೇ ಕೆಲಸ ಮಾಡ್ತಿದ್ದ. 2003ರಲ್ಲಿ ರವಿ ಪೂಜಾರಿ ಗ್ಯಾಂಗ್ ಸೇರಿದ ಸುರೇಶ್ ಪೂಜಾರಿ ದೇಶವನ್ನ ಬಿಟ್ಟು ವಿದೇಶಕ್ಕೆ ಹಾರಿದ.
ಕೆಲ ಕಾಲ ರವಿ ಪೂಜಾರಿ ಬಲಗೈ ಬಂಟನಾಗಿದ್ದ ಈತ, ಬೆಂಗಳೂರಿನಲ್ಲಿ ರವಿ ಪೂಜಾರಿ ನಡೆಸಿದ ಹಲವು ವ್ಯವಹಾರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ. ಆದರೆ, ನಂತರದ ದಿನಗಳಲ್ಲಿ ರವಿ ಪೂಜಾರಿ ಗ್ಯಾಂಗ್ ತೊರೆದು ತನ್ನದೇ ಗ್ಯಾಂಗ್ ಕಟ್ಟಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ.
ಇದನ್ನೂ ಓದಿ: ಮಂಗಳೂರಿನಲ್ಲಿ ಬಿಜೆಪಿ ಮುಖಂಡನ ಮೇಲೆ ತಲವಾರ್ನಿಂದ ದಾಳಿ
ಇತ್ತೀಚಿನವರೆಗೂ ಮುಂಬೈ, ನವಮುಂಬೈ ಹಾಗೂ ಥಾಣೆಯಲ್ಲಿ ನಡೆಯುತ್ತಿದ್ದ ಅಪರಾಧ ಚಟುವಟಿಕೆಗಳಲ್ಲಿ ಸುರೇಶ್ ಪೂಜಾರಿ ಹೆಸರು ಕೇಳಿ ಬರುತ್ತಿತ್ತು. ಇದೀಗ ಮುಂಬೈ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಇಂಟರ್ ಪೋಲ್ ಪೊಲೀಸರು ಫಿಲಿಫೈನ್ಸ್ನಲ್ಲಿ ಸುರೇಶ್ ಪೂಜಾರಿಯನ್ನ ಬಂಧಿಸಿದ್ದಾರೆ. ಸದ್ಯ ಆತನನ್ನ ಭಾರತಕ್ಕೆ ಕರೆತರಲು ಪ್ರಯತ್ನಗಳು ಶುರುವಾಗಿದ್ದು, ಹಳೆ ಕೇಸ್ಗಳೆಲ್ಲ ಮರು ಜೀವ ಪಡೆಯಲಿವೆ.