ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಂದಿದ್ದು ರಾಜ್ಯಕ್ಕೆ ಕೊಡುಗೆ ನೀಡುವುದಕ್ಕೆ ಅಲ್ಲ ಪೌರತ್ವದ ಕಿಚ್ಚು ನಂದಿಸೋಕೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದಗಂಗಾ ಮಠ ಎಲ್ಲರಿಗೆ ನ್ಯಾಯಕಲ್ಪಿಸಿದೆ. ಅಲ್ಲಿಗೆ ಹೋಗಿ ಕಾಂಗ್ರೆಸ್ ಅನ್ನು ಬೈಯ್ಯುವುದಕ್ಕೆ ಮಠವನ್ನು ಮೋದಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ರೈತರ ಸಮಸ್ಯೆ ಕೇಳೋಕೆ ಪ್ರಧಾನಿ ಬರಲಿಲ್ಲ. ಪ್ರವಾಹ ಆದಾಗಲೂ ಅವರು ಇಲ್ಲಿಗೆ ಬರಲಿಲ್ಲ. ಸಂತ್ರಸ್ತರಿಗೆ ಪರಿಹಾರ ಕೊಡೋಕೆ ಆಗಲಿಲ್ಲ. ಆದರೆ ಈಗ ಪೌರತ್ವದ ಕಿಚ್ಚು ನಂದಿಸೋಕೆ ಬಂದಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೇ ಅಮಾಯಕ ವಿದ್ಯಾರ್ಥಿಗಳ ಮುಂದೆ ರಾಜಕಾರಣ ಮಾಡುವುದು ಸರಿಯೇ? ಪ್ರಚೋದನಕಾರಿ ಭಾಷಣ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದರು.
ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಸಭೆ ಕರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಖರ್ಗೆ, ನನಗೆ ಇದರ ಬಗ್ಗೆ ಗೊತ್ತಿಲ್ಲ. ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಮಾಡಬಹುದು. ನಾನು ಮಹಾರಾಷ್ಟ್ರ ಖಾತೆ ಹಂಚಿಕೆಯಲ್ಲಿ ಬ್ಯುಸಿಯಾಗಿದ್ದೆ. ಇನ್ನೂ ಕೆಲವು ಖಾತೆಗಳು ಹಂಚಿಕೆಯಾಗಬೇಕಿದೆ. ಇದರ ಬಗ್ಗೆ ಅಲ್ಲಿ ಚರ್ಚೆಯಲ್ಲಿ ಇದ್ದೆ. ಸಭೆಯ ಬಗ್ಗೆ ಅಷ್ಟು ಗೊತ್ತಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಜಾರ್ಖಂಡ್ ಚುನಾವಣೆ ಆಯ್ತು, ದೆಹಲಿ ಚುನಾವಣೆಯಿದೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಒಂದೆರಡ್ಮೂರು ರಾಜ್ಯಗಳಲ್ಲಿ ಬದಲಾವಣೆಯಾಗಬೇಕಿದೆ. ಇನ್ನೇನು ನೇಮಕ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಸಿದರು.