ಬೆಂಗಳೂರು: ಸರ್ಕಾರ ಒಂದಲ್ಲ ಒಂದು ವಿಷಯ ತಂದು ಸಂಸತ್ನಲ್ಲಿ ಗದ್ದಲ ಮಾಡುತ್ತಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಷ್ಟ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅವಕಾಶ ಕೊಡುತ್ತಿಲ್ಲ. ಗಂಭೀರ ಚರ್ಚೆಗೆ ಅವಕಾಶ ಕೊಡದಿರುವುದು ಬಹಳ ನೋವಾಗುತ್ತಿದೆ. ಈ ರೀತಿಯ ಹಠಮಾರಿತನ ಧೋರಣೆಯನ್ನು ನಾನು ನೋಡಿಲ್ಲ ಎಂದರು.
ಕಾನೂನು ಸುವ್ಯವಸ್ಥೆ ಚೆನ್ನಾಗಿದ್ರೆ ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತದೆ. ಬಂಡವಾಳ ಹೂಡಿಕೆ ಸಹಜವಾಗಿಯೇ ಹೆಚ್ಚಾಗುತ್ತದೆ. ರಾಜ್ಯದಲ್ಲಿ ಬಂಡವಾಳ ಹೂಡಲು ಹೊರಗಿನವರು ಇಚ್ಛೆ ಪಡುತ್ತಾರೆ. ಹೀಗಿರುವಾಗ ಕಾನೂನು ಸುವ್ಯವಸ್ಥೆ ಸರಿ ಇಲ್ಲದೇ ಇದ್ರೆ ಅಭಿವೃದ್ಧಿಗೆ ಮಾರಕ. ಹಿಂದು, ಮುಸ್ಲಿಂ ಯಾರೇ ಇರಲಿ ಕ್ರಮ ತೆಗೆದುಕೊಳ್ಳಬೇಕು. ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಎಂದರು.
ಇದನ್ನೂ ಓದಿ: ದಾವಣಗೆರೆ ಜನಸಂಪರ್ಕ ಕಚೇರಿ ಒಳಗಡೆ ನಿಲ್ಲಿಸಿದ್ದ ಕಾರಿನಲ್ಲಿ ಮಾರಕಾಸ್ತ್ರ ಪತ್ತೆ: ದೂರು ದಾಖಲು
ಒಬ್ಬರಿಗೆ ರಕ್ಷಣೆ ಕೊಡೋದು, ಪರಿಹಾರ ಕೊಡೋದು, ಇನ್ನೊಬ್ಬರಿಗೆ ಪರಿಹಾರವೂ ಇಲ್ಲ, ಸಾಂತ್ವನವೂ ಇಲ್ಲ. ಇದು ಸರಿಯಾದ ನಡೆಯಲ್ಲ ಎಂದರು. ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಆಟ ನಡೆಯೋದಿಲ್ಲ ಎಂಬ ಬಾಬುರಾವ್ ಚಿಂಚನಸೂರು ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಹೌದು, ನಮಗೆ ಶಕ್ತಿ ಇಲ್ಲ ಬಿಡಿ ಎಂದು ಹೇಳಿ ಕೋಪದಿಂದ ತೆರಳಿದರು. ಸಿದ್ದರಾಮೋತ್ಸವ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಲಿಲ್ಲ.