ದೇವನಹಳ್ಳಿ/ಬೆಂಗಳೂರು: ಬಿಜೆಪಿಯಲ್ಲಿ ನಡೆಯುತ್ತಿರುವ ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸ್ಥಾನ ದಲಿತರಿಗೆ, ಬೇರೆಯವರಿಗೆ ಕೊಡಿ ಎಂದು ಭಿಕ್ಷೆ ಕೇಳಕ್ಕಾಗಲ್ಲ ಎಂದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಿಂದ ದೆಹಲಿಗೆ ತೆರಳುವ ಮುನ್ನ ಬಿಜೆಪಿ ಪಕ್ಷದಲ್ಲಿನ ಸಿಎಂ ರೇಸ್ ಬಗ್ಗೆ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮದೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ದಲಿತರನ್ನ ಸಿಎಂ ಮಾಡುವುದು, ಬಿಡುವುದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಯಾರಿಗೆ ಕೊಡಬೇಕು, ಬಿಡಬೇಕು ಎನ್ನುವುದು ಅವರ ಪಕ್ಷದ ವಿಚಾರ. ನಾನು ಬೇರೆಯವರ ಪಕ್ಷದ ಬಗ್ಗೆ ಮಾತನಾಡಲ್ಲ. ಈಗಾಗಲೇ ಹೆಚ್ಚಿನ ಮಳೆಯಿಂದಾಗಿ ರಾಜ್ಯದ ಜನರು ಪ್ರವಾಹದಿಂದ ಸಂಕಷ್ಟದಲ್ಲಿದ್ದಾರೆ. ಅವರಿಗೆ ಪರಿಹಾರ ಮತ್ತು ಸಂಕಷ್ಟಗಳಿಗೆ ಸ್ವಂದಿಸುವ ಕೆಲಸ ಮಾಡಬೇಕು ಎಂದರು.
ಸಿಎಂ ಬದಲಾವಣೆ ಮಾಡದಂತೆ ಮಠಾಧೀಶರ ಸಮಾವೇಶ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಮಠಾಧೀಶರ ಬಗ್ಗೆ ಟೀಕೆ ಮಾಡಲ್ಲ. ಧರ್ಮ ಬೇರೆ, ರಾಜಕೀಯ ಬೇರೆ. ಒಂದು ರಾಜಕೀಯ ಪಕ್ಷದಲ್ಲಿ ಒಂದೇ ಧರ್ಮದ ಜನ ಇರೋದಿಲ್ಲ. ಆ ಧರ್ಮದ ಜನ ಸಾಕಷ್ಟು ಪಕ್ಷಗಳಲ್ಲಿ ಇದ್ದಾರೆ. ಕಮ್ಯುನಿಸ್ಟ್, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲಾ ಪಕ್ಷಗಳಲ್ಲು ಇದ್ದಾರೆ. ಹೀಗಾಗಿ ಈ ಬಗ್ಗೆ ಮಠಾಧೀಶರು ಯೋಚನೆ ಮಾಡಬೇಕು ಎಂದರು.
ಇದನ್ನೂ ಓದಿ: 'ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರೆ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ'