ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಐಸಿಯು ಹಾಗೂ ವೆಂಟಿಲೇಟರ್ ಬೆಡ್ಗಳ ಕೊರತೆ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ಮಾಡ್ಯೂಲರ್ ಐಸಿಯು ಹಾಗೂ ವೆಂಟಿಲೇಟರ್ ಅಳವಡಿಕೆಗೆ ಸಂಬಂಧಿಸಿದಂತೆ ಸಚಿವ ಡಾ. ಕೆ.ಸುಧಾಕರ್ ಇಂದು ಸ್ಥಳ ಪರಿಶೀಲನೆ ನಡೆಸಿದರು. ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿರ್ಮಾಣ ಮಾಡಲು ತಯಾರಿ ನಡೆಸಿದ್ದು, ಪ್ಲಾನಿಂಗ್ ಶೀಟ್ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಮಾತಾನಾಡಿದ ಸಚಿವ ಸುಧಾಕರ್, ರಾಜ್ಯಕ್ಕೆ 300 ಟನ್ನಷ್ಟು ಆಕ್ಸಿಜನ್ ಕೇಂದ್ರ ಸರ್ಕಾರ ಕೊಟ್ಟಿದ್ದರೂ ಅದರ ಸಾಮರ್ಥ್ಯ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಅದರಂತೆ ನಿನ್ನೆಯೇ 800 ಟನ್ ಹೆಚ್ಚು ಮಾಡಿದ್ದು, ಏಪ್ರಿಲ್ 30ರವರಗೆ ಸಿಗಲಿದೆ. ಅದೇ ರೀತಿ ರೆಮ್ಡೆಸಿವಿರ್ ವೈಲ್ಸ್ ಕನಿಷ್ಠ 1 ಲಕ್ಷ ನೀಡುವಂತೆ ಪತ್ರ ಬರೆಯಲಾಗಿತ್ತು. ಅದರಂತೆ 1,22,000 ವೈಲ್ಸ್ಗಳನ್ನ ಏಪ್ರಿಲ್ 30ರವೆಗೆ ಕೊಟ್ಟಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಕ್ಸಿಜನ್ ಅಥವಾ ರೆಮ್ಡಿಸಿವಿರ್ ಕೊರತೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಆಕ್ಸಿಜನ್ ಬೇಕಾಗುತ್ತೆ. ಅದನ್ನೂ ಸಹ ಕೇಂದ್ರ ಸರ್ಕಾರ ಅಗತ್ಯಕ್ಕೆ ತಕ್ಕಂತೆ ಪೂರೈಸಲಿದೆ. ಈಗಾಗಲೇ ಹಲವು ಕಂಪನಿಗಳ ಪ್ರೊಡಕ್ಷನ್ ಕೆಲಸ ಶುರುವಾಗಿದ್ದು, ರೆಮ್ಡಿಸಿವಿರ್ ಕೊರತೆ ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯ ಐಸಿಯು, ವೆಂಟಿಲೇಟರ್ ಬೆಡ್ಗಳ ಕೊರತೆ ಇದ್ದು, ಇದನ್ನು ನೀಗಿಸಲು ಎರಡು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. ಒಂದು ಖಾಸಗಿ ಆಸ್ಪತ್ರೆಯಲ್ಲಿ ಶೇ. 50ರ ಬದಲಿಗೆ 80%ರಷ್ಟು ಕೋವಿಡ್ ಚಿಕಿತ್ಸೆಗೆ ಮೀಸಲಿಡಲು ಸೂಚಿಸಲಾಗಿತ್ತು. ಆದರೆ, ನಾನ್ ಕೋವಿಡ್ ರೋಗಿಗಳ ತುರ್ತು ಚಿಕಿತ್ಸೆಗೆ ಬೆಡ್ಗಳು ಬೇಕಾಗುವುದರಿಂದ ಶೇ. 80ರ ಬದಲಿಗೆ ಶೇ. 75%ರಷ್ಟು ಮೀಸಲಿಡಲು ಸೂಚಿಸಲಾಗಿದೆ. ಎರಡನೇಯದ್ದು ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ಮಾತ್ರ 2000-2500 ಐಸಿಯು ಹಾಸಿಗೆ, ವೆಂಟಿಲೇಟರ್ ಹಾಸಿಗೆ ಇರುವ ಘಟಕವನ್ನ ನಿರ್ಮಾಣ ಮಾಡಲಾಗುತ್ತಿದೆ. ವಿಕ್ಟೋರಿಯಾ ಕ್ಯಾಂಪಸ್ನಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. 200-250 ಕೆಪಾಸಿಟಿಯ ಯೂನಿಟ್ಗಳನ್ನ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಅಭಿವೃದ್ಧಿ ಮಾಡಲು ನಿರ್ಧರಿಸಿದ್ದೇವೆ. ಮುಂದಿನ 15 ದಿನದೊಳಗೆ ಈ ಕೆಲಸ ಮುಗಿಸುವ ಗುರಿ ಹೊಂದಿದ್ದೇವೆ ಎಂದರು.