ಬೆಂಗಳೂರು : ಪ್ರತಿಯೊಬ್ಬ ಯುವಕರು ಪಕ್ಷ ಸಂಘಟನೆಗೆ ಹೋರಾಡಿ, ಬಿಜೆಪಿಯವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕರೆ ಕೊಟ್ಟರು.
ನಗರದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆಗೆ ಎಷ್ಟು ಯುವಕರನ್ನು ಸೇರ್ಪಡೆ ಮಾಡುತ್ತೀರಿ ಎಂಬುದು ಮುಖ್ಯ. ಬಿಜೆಪಿಯ ತತ್ವ-ಸಿದ್ಧಾಂತ ಹಾಗೂ ಆಡಳಿತ ಲೋಪಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.
ಅವರು ಏನಾದರೂ ಮಾಡಲಿ, ಪಕ್ಷಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ನಿನ್ನೆ ಆದದ್ದು, ನಾಳೆ ಆಗುವುದನ್ನು ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲ. ಇಂದಿನ ಸಂಘಟನೆ ನಿಮ್ಮ ಕೈಯಲ್ಲಿದೆ. ಸದ್ಬಳಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಯುವನಾಯಕರ ಸೇವೆಯನ್ನು ಪಕ್ಷ ಸದ್ಬಳಕೆ ಮಾಡಿಕೊಳ್ಳಲಿದೆ. ಮೊದಲು ನಿಮ್ಮನ್ನು ನೀವು ಗುರುತಿಸಿಕೊಳ್ಳುವ ಪ್ರಯತ್ನ ಮಾಡಿ, ಅವಕಾಶವನ್ನ ಪಕ್ಷ ನೀಡಲಿದೆ. ನಿಮ್ಮದೇ ಆದ ಒಂದು ಪ್ರತ್ಯೇಕ ಪ್ರಬಲ ಸಂಘಟನೆಯನ್ನು ಮಾಡಿಕೊಳ್ಳಿ. ಡಿಜಿಟಲ್ ಯುವಸಮುದಾಯ ಕಟ್ಟುವ ಕಾರ್ಯ ನಿಮ್ಮದಾಗಲಿ ಎಂದರು.
ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ : ಈ ದೇಶಕ್ಕೆ ವಿದ್ಯಾವಂತರು, ಬುದ್ಧಿವಂತರು ಇಲ್ಲದಿದ್ದರೂ ನಡೆಯುತ್ತದೆ. ಬದ್ಧತೆ ಇರುವ ಜನರ ಅಗತ್ಯ ಹೆಚ್ಚಾಗಿದೆ. ಈ ದೇಶದಲ್ಲೇ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಯುವ ಜನತೆಯಿಂದ ಮಾತ್ರ ಸಾಧ್ಯ. ಬಿಜೆಪಿ ದೇಶಕ್ಕಾಗಿ ಏನು ಮಾಡಿದೆ ಎಂಬುದನ್ನು ದೇಶದ ಹಾಗೂ ರಾಜ್ಯದ ಯುವಕರಿಗೆ ತಿಳಿಸುವ ಕಾರ್ಯ ಮಾಡಿ.
ಮೊದಲು ಬಿಜೆಪಿ ಸರ್ಕಾರದ ಲೋಪವನ್ನು ಹುಡುಕಿ ಪಟ್ಟಿ ಮಾಡಿ ಇದನ್ನು ಯುವ ಸಮುದಾಯಕ್ಕೆ ತಲುಪಿಸುವ ಕಾರ್ಯ ಮಾಡಿ. ಕೃಷ್ಣಾ ಆಳ್ವಾರ್ ನಿಮಗೆ ಡೈರೆಕ್ಷನ್ ಕೊಟ್ಟಿದ್ದಾರೆ. ಅವರ ಡೈರೆಕ್ಷನ್ ನೀವು ಅನುಸರಿಸಿದರೆ ಸಾಕು. ನಿಮ್ಮ ಹಿಂದೆ ನಾವು ನಿಲ್ಲುತ್ತೇವೆ. ಅಧ್ಯಕ್ಷ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ದೇಶಕ್ಕೆ ಗಾಂಧಿ ಕುಟುಂಬ ಸಾಕಷ್ಟು ಬಲಿದಾನ ಮಾಡಿದೆ : ಕಾಂಗ್ರೆಸ್ ಈ ದೇಶದ ಶಕ್ತಿ. ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರದ್ದು ಏನೇನೂ ಇಲ್ಲ. ಅಧಿಕಾರ ಮುಖ್ಯವಲ್ಲ, ದೇಶದ ಭವಿಷ್ಯ ಮುಖ್ಯ. ಅಧಿಕಾರವನ್ನು ತ್ಯಾಗ ಮಾಡಿದವರು ಸೋನಿಯಾ. ಅವರು ಮನಸ್ಸು ಮಾಡಿದ್ದರೆ ಪ್ರಧಾನಿಯಾಗುತ್ತಿದ್ದರು. ರಾಹುಲ್ ಗಾಂಧಿ ಪ್ರಧಾನಿಯಾಗಬಹುದಿತ್ತು. ಅವರು ಸಚಿವರಾಗಬಹುದಿತ್ತು. ಆಗಲಿಲ್ಲ. ಇಂದಿರಾ ಗಾಂಧಿ ದೇಶಕ್ಕೆ ಪ್ರಾಣ ಕೊಟ್ಟರು. ರಾಜೀವ್ ದೇಶದ ಐಕ್ಯತೆಗೆ ಬಲಿದಾನ ಮಾಡಿದರು. ಬಿಜೆಪಿಯವರು ಯಾವ ಬಲಿದಾನ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಬಳಿಕ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಮಾತನಾಡಿ, ಸುಳ್ಳಿನ ಸರಮಾಲೆಯನ್ನು ಬಿಜೆಪಿ ಹೊಂದಿದೆ. ದೇಶಕ್ಕಾಗಿ ಒಂದೇ ಒಂದು ಉತ್ತಮ ಕೆಲಸ ಮಾಡಿಲ್ಲ. ಮುಂದೆ ನಿಮಗೆ ರಾಜ್ಯದ ಜನ ಬುದ್ಧಿ ಕಲಿಸುತ್ತಾರೆ. ಕೋವಿಡ್ನಲ್ಲಿ ಬಿಜೆಪಿಯವರ ಹೊರ ಬರಲಿಲ್ಲ. ಮಾಸ್ಕ್ ಹಾಕಿಕೊಂಡು ಮನೆಯಲ್ಲೇ ಉಳಿದಿದ್ರು. ಬೀದಿಗೆ ಬಂದು ಜನರಿಗೆ ನೆರವಾಗಿದ್ದು ಕಾಂಗ್ರೆಸ್.
ಬಿಜೆಪಿಯವರು ದುಡ್ಡು ಹೊಡೆದಿದ್ದೇ ಸಾಧನೆ. ಹೆಣ ಸುಡೋದ್ರಲ್ಲಿ, ಆಸ್ಪತ್ರೆ ಬೆಡ್ನಲ್ಲೂ ಹಣ ಹೊಡೆದಿರುವುದೇ ಬಿಜೆಪಿ ಸಾಧನೆಯಾಗಿದೆ. 2 ಕೋಟಿ ಉದ್ಯೋಗ ಕೊಡ್ತೇವೆ ಅಂದ್ರು ಕೊಟ್ರಾ?, ಸ್ವಿಸ್ ಬ್ಯಾಂಕ್ ಹಣ ವಾಪಸ್ ತಂದ್ರಾ? ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕಿದ್ರಾ? ಯಾವ ಹಣವನ್ನೂ ಹಾಕಲಿಲ್ಲ. ರಾಜ್ಯವನ್ನು ಕೊಳ್ಳೆ ಹೊಡೆದಿದ್ದು ಬಿಜೆಪಿಯವರು ಎಂದರು.
ಬಿಜೆಪಿ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿಲ್ಲ : ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಅಧಿಕಾರ ಸಿಕ್ಕಿರುವುದು ಕೇವಲ ಅದನ್ನು ಚಲಾಯಿಸುವುದಕ್ಕಾಗಿ ಅಲ್ಲ. ನೀವು ನಿಮ್ಮ ಮೇಲಿರುವ ಮಹತ್ವದ ಜವಾಬ್ದಾರಿ ಒಪ್ಪಿಕೊಳ್ಳುತ್ತಿದ್ದೇನೆ ಎಂದರ್ಥ. ಎಲ್ಲರಿಗೂ ಅಧಿಕಾರ ಪಡೆಯುವ ಅವಕಾಶ ಸಿಗುವುದಿಲ್ಲ. ನಾವೆಲ್ಲ ಈ ದೇಶದ ಪ್ರಜೆಗಳು.
ಸ್ವತಂತ್ರ ಜೀವಿಗಳಾಗಿ ಬದುಕುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಇದನ್ನು ಯಾರೂ ಮರೆಯಬಾರದು. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಮಾರ್ಗದಲ್ಲಿ ನಡೆಯಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
ಪ್ರಧಾನಿ ನರೇಂದ್ರ ಮೋದಿ ಸಹ ಈ ದೇಶದ ಸ್ವಾತಂತ್ರ್ಯದ ಫಲಾನುಭವಿಯಾಗಿದ್ದಾರೆ. ಆರ್ಎಸ್ಎಸ್, ಜನಸಂಘ ಹಾಗೂ ಬಿಜೆಪಿ ಯಾವುದೇ ನಾಯಕರು ಸ್ವತಂತ್ರ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರಲ್ಲ. ಈ ಹಿನ್ನೆಲೆ ಇರುವುದು ಕಾಂಗ್ರೆಸ್ ನಾಯಕರಿಗೆ ಮಾತ್ರ. ನಾವು ಪಕ್ಷದ ಸದಸ್ಯರು ಎಂಬುದು ಹೆಮ್ಮೆ ಪಡಬೇಕಾದ ಸಂಗತಿ ಎಂದರು.
ಬಿಜೆಪಿಯವರು ಡೋಂಗಿಗಳು : ಬಿಜೆಪಿಯವರು ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸತ್ಯ ಜನರಿಗೆ ತಿಳಿಯಬಾರದು ಎಂದು ಸುಳ್ಳನ್ನು ಸತ್ಯವಾಗಿಸುತ್ತಿದ್ದಾರೆ. ಸತ್ಯ ಗೊತ್ತಾದ್ರೆ ಅವರೊಂದಿಗೆ ಯಾರೂ ಹೋಗಲ್ಲ. ಪಕ್ಷದ ಬಲ ಕಡಿಮೆಯಾಗುತ್ತದೆ. ಸಿ ಟಿ ರವಿ ಅಂತಹ ಒಬ್ಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇತಿಹಾಸ ಓದಿಕೊಂಡಿಲ್ಲ. ಇತಿಹಾಸದ ಅರಿವಿದ್ದರೆ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಬಗ್ಗೆ ಹಗುರವಾಗಿ ಮಾತನಾಡಲು ಸಾಧ್ಯವಿರಲಿಲ್ಲ.
ಈ ದೇಶಕ್ಕಾಗಿ ಪ್ರಾಣ ತೆತ್ತವರು ಯಾರಾದರೂ ಬಿಜೆಪಿ ಪಕ್ಷದಲ್ಲಿ ಇದ್ದಾರಾ? ದೇಶಪ್ರೇಮ, ಭಾರತೀಯತೆ, ಹಿಂದುತ್ವ, ದೇಶಭಕ್ತಿಯ ಮಾತನ್ನು ಮಾತ್ರ ಆಡುತ್ತಾರೆ. ಟಿಪ್ಪು ಸುಲ್ತಾನ್ ಜಯಂತಿ ಮಾಡಿದರೆ ವಿರೋಧಿಸುವ ಬಿಜೆಪಿಯವರೇ, ದಿವಾನ್ ಪೂರ್ಣಯ್ಯ ಟಿಪ್ಪು ಅವರ ಆಡಳಿತಾವಧಿಯಲ್ಲಿ ಕಾರ್ಯನಿರ್ವಹಿಸಿದ್ದು ಗೊತ್ತಿಲ್ಲವೇ? ಇತಿಹಾಸ ಅರಿಯದೆ ಬಿಜೆಪಿಯವರು ಮಾತನಾಡುತ್ತಾರೆ. ಬಿಜೆಪಿ ಅವರಂತಹ ಡೋಂಗಿಗಳು ರಾಷ್ಟ್ರದ ಇತಿಹಾಸದಲ್ಲೇ ಯಾರೂ ಸಿಗಲ್ಲ ಎಂದರು.
ಒಳ್ಳೆ ದಿನ ಬರಲಿದೆ ಎಂದೇಳಿ ದೇಶವನ್ನು ಸರ್ವನಾಶದತ್ತ ಬಿಜೆಪಿ ಕೊಂಡೊಯ್ದಿದೆ. ಎಲ್ಲಾ ಬೆಲೆಗಳು ಗಗನಕ್ಕೇರಿವೆ. ಇತಿಹಾಸ ಗೊತ್ತಿದ್ದರಿಂದ ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ. ಬಿಜೆಪಿಯವರು ಬೇಕೆಂದೇ ಸುಳ್ಳು ಹೇಳುತ್ತಾರೆ. ನೀವು ಸತ್ಯವನ್ನು ತಿಳಿದು ಮಾತನಾಡಿ. ಇತಿಹಾಸವನ್ನ ಜನರ ಮುಂದಿಡುವ ಪ್ರಯತ್ನವನ್ನು ಯುವಕರು ಮಾಡಲೇಬೇಕು. ಆಗ ಮಾತ್ರ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಎಂದು ಕರೆಕೊಟ್ಟರು.