ಬೆಂಗಳೂರು: ಮಾಜಿ ಶಾಸಕ ಮಧು ಬಂಗಾರಪ್ಪ ಜುಲೈ 30ರಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
ವರ್ಷದ ಹಿಂದೆ ಜೆಡಿಎಸ್ ತ್ಯಜಿಸಿರುವ ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗುವುದಕ್ಕೆ ಈ ಹಿಂದೆಯೇ ಘೋಷಿಸಿದ್ದರು. ಕೋವಿಡ್ ಮೊದಲ ಹಾಗೂ ಎರಡನೇ ಅಲೆ ಲಾಕ್ಡೌನ್ ಹಿನ್ನೆಲೆ ಅಧಿಕೃತ ಸೇರ್ಪಡೆಗೆ ಅವಕಾಶ ಒದಗಿ ಬಂದಿರಲಿಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ಶಿವಮೊಗ್ಗದಲ್ಲಿ ನಡೆಸಿದ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿಯೇ ಕಾಂಗ್ರೆಸ್ ಸೇರ್ಪಡೆ ಆಗಬೇಕಿತ್ತು. ಆದರೆ ಕೆಲಕಾರಣಗಳಿಂದ ಸೇರ್ಪಡೆ ಮುಂದಕ್ಕೆ ಹೋಗಿತ್ತು.
ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ವಿರೋಧದ ಹಿನ್ನೆಲೆ ಸೇರ್ಪಡೆ ಕೆಲದಿನ ಮುಂದಕ್ಕೆ ಹೋಗಿತ್ತು. ಇದೀಗ ರಾಜ್ಯ ಕಾಂಗ್ರೆಸ್ ನಾಯಕರು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಾಯಕರ ಮನವೊಲಿಸುವಲ್ಲಿ ಸಫಲರಾಗಿದ್ದು, ಸೇರ್ಪಡೆಗೆ ಮುಹೂರ್ತ ನಿಗದಿ ಮಾಡಿದ್ದಾರೆ. ಸೊರಬದ ಮಾಜಿ ಶಾಸಕ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿದ್ದ ಮಧು ಬಂಗಾರಪ್ಪ, ಜೆಡಿಎಸ್ನಲ್ಲಿ ತಮಗೆ ಸ್ಥಾನಮಾನ ಸಿಗದ ಹಿನ್ನೆಲೆ ಮಾನಸಿಕವಾಗಿ ತ್ಯಜಿಸಿದ್ದರು. ಇದೀಗ ತಾವು ಜುಲೈ 30ರಂದು ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
" ನಾನು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗುತ್ತೇನೆ. ನನ್ನ ತಂದೆಯವರಾದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಕರ್ಮಭೂಮಿಯಾದ ಶಿವಮೊಗ್ಗ ಜಿಲ್ಲೆಯಲ್ಲಿ ನಾನು ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಲು ತೀರ್ಮಾನಿಸಿದ್ದೆ. ಆದರೆ ಕೋವಿಡ್ ಹಾಗೂ ಅತಿವೃಷ್ಟಿ ಹಿನ್ನೆಲೆ ಕಾಂಗ್ರೆಸ್ ಪಕ್ಷ ಸೇರುವುದು ವಿಳಂಬವಾಗಿತ್ತು. ಈಗ ಜುಲೈ 30ರಂದು ಬೆಳಗ್ಗೆ 9 ಘಂಟೆಗೆ ಹುಬ್ಬಳ್ಳಿಯ ವಿಮಾನನಿಲ್ದಾಣ ರಸ್ತೆಯ ಗೋಕುಲ್ ಗಾರ್ಡನ್ ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕದ ಉಸ್ತುವಾರಿಗಳು ಆಗಿರುವ ರಣದೀಪ್ ಸಿಂಗ್ ಸುರ್ಜೆವಾಲಾ ಕಾರ್ಯದರ್ಶಿ ಮಧು ಯಕ್ಷಿಗೌಡ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬಿಎಸ್ ಯಡಿಯೂರಪ್ಪ ಪ್ರಬಲರಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಗುರುತಿಸಿಕೊಂಡ ಸಂದರ್ಭ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದ ಕುಮಾರ್ ಬಂಗಾರಪ್ಪ ಹಾಲಿ ಶಾಸಕರಾಗಿ ಸೊರಬ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸೇರುವ ಸಾಧ್ಯತೆಯೂ ಹೆಚ್ಚಿದೆ. ಈ ಸಂದರ್ಭದಲ್ಲಿ ರಾಜಕೀಯವಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ಗಿಂತ ಕಾಂಗ್ರೆಸ್ ಸೇರ್ಪಡೆಯಾಗುವುದು ಸೂಕ್ತ ಎಂದು ಮಧು ಬಂಗಾರಪ್ಪ ನಿರ್ಧರಿಸಿದ್ದಾರೆ.
ತಮ್ಮ ಸೋದರ ಕುಮಾರ್ ಬಂಗಾರಪ್ಪ ವಿರುದ್ಧ ಮುಂಬರುವ ಚುನಾವಣೆಯಲ್ಲಿ ಪ್ರಬಲ ಪ್ರತಿಸ್ಪರ್ಧೆಯೊಡ್ಡಲು ಕಾಂಗ್ರೆಸ್ ಪಕ್ಷವೇ ತಮ್ಮ ಪಾಲಿಗೆ ಸೂಕ್ತ ವೇದಿಕೆ ಎಂದು ತೀರ್ಮಾನಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ತಂದೆ ಎಸ್. ಬಂಗಾರಪ್ಪಗೆ ರಾಜಕೀಯ ನೆಲೆ ಒದಗಿಸಿದೆ ಪಕ್ಷದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ತೀರ್ಮಾನಿಸಿದ್ದಾರೆ.