ಬೆಂಗಳೂರು : ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಅಡಿ ವಿಧಾನ ಪರಿಷತ್‌ನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನೀರಾವರಿ ವಿಚಾರ ಮರೆತಿರಾ?: ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಕೊರೊನಾದಿಂದಾಗಿ ಜಿಲ್ಲಾ ಮಟ್ಟದ ಆಸ್ಪತ್ರೆಗಳು ಸುಧಾರಣೆ ಆಗಿವೆ. ಹಾಗೆಯೇ ವ್ಯತ್ಯಾಸಗಳೂ ಇವೆ. ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೊಳಗಾಗಿದೆ. ಶಿಕ್ಷಕರು ಬೀದಿಗೆ ಬಿದ್ದಿದ್ದಾರೆ.
ಬದುಕಿಗೆ ಹತ್ತಾರು ಹಾದಿ ಹುಡುಕಿದರೂ ಅನುದಾನಿತ ಶಾಲಾ ಶಿಕ್ಷಕರ ಬದುಕು ಬೀದಿಗೆ ಬಂದಿದೆ. ರೈತರ ಸ್ಥಿತಿ ಶೋಚನೀಯವಾಗಿದೆ. 18 ಲಕ್ಷ 8 ಸಾವಿರ ಕುಟುಂಬಗಳು ಸಾಲ ಮನ್ನಾಗೆ ನೋಂದಣಿ ಆಗಿದ್ದಾರೆ. 550 ಕೋಟಿ ರೂ. ಸಾಲ ಮನ್ನಾ ಮೊತ್ತ ಬಿಡುಗಡೆ ಆಗಬೇಕು ಎಂದರು.
ಕುಮಾರಸ್ವಾಮಿ ಸಿಎಂ ಆದಾಗ ಘೋಷಿಸಿದ್ದ ಸಾಲಮನ್ನಾ ಮೊತ್ತವೇ ಬಿಡುಗಡೆ ಆಗಿಲ್ಲ. ಮುಂದಿನ ಬಜೆಟ್‌ನಲ್ಲಿ ಸಂಪೂರ್ಣ ಸಾಲಮನ್ನಾ ಆಗಲಿದೆ ಎಂಬುದು ನನ್ನ ನಂಬಿಕೆ. ನೀರು, ನುಡಿ, ನೆಲದ ವಿಚಾರದಲ್ಲಿ ಕೈಗೊಳ್ಳಬಹುದಾದ ಹಲವು ವಿಚಾರವನ್ನು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಿಲ್ಲ.
ಕಾವೇರಿ, ಕೃಷ್ಣಾ, ಮಹದಾಯಿ, ಕಳಸಾ-ಬಂಡೂರಿ, ಎತ್ತಿನಹೊಳೆ ವಿಚಾರಗಳು ಪ್ರಸ್ತಾಪವೇ ಆಗಿಲ್ಲ. ಹೋರಾಟಕ್ಕೆ ಬೆಲೆ ಸಿಗುತ್ತಿಲ್ಲ. ಜ್ವಲಂತ ನೀರಾವರಿ ಯೋಜನೆಗಳೇ ಪ್ರಸ್ತಾಪ ಆಗಿಲ್ಲ ಅಂದರೆ ರಾಜ್ಯಪಾಲರ ಭಾಷಣ ನಮಗೆ ಹೇಗೆ ರುಚಿಸುತ್ತದೆ. ಒಂದು ಮಾತು ರೈತರ ಬಗ್ಗೆ ಪ್ರಸ್ತಾಪ ಇಲ್ಲ ಅಂದರೆ ಈ ಬಗ್ಗೆ ಸರ್ಕಾರಕ್ಕೆ ಗಮನ ಇಲ್ಲವಾ? ಕನಿಷ್ಟ ಮುಂದಿನ ಬಜೆಟ್ ವೇಳೆಗಾದರೂ ಆದ್ಯತೆ ಸಿಗಲಿ ಎಂದು ಆಶಿಸಿದರು.
ಪಡಿತರದಲ್ಲಿ ಬೆಲ್ಲ ಪರಿಚಯಿಸಿ : ಶ್ರೀಕಂಠೇಗೌಡ ಮಾತು ಮುಂದುವರಿಸಿ, ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ವಹಿಸುವ ಮಾತು ಕೇಳಿ ಬರುತ್ತಿದೆ. ಇದು ಎಂತಹ ನ್ಯಾಯ?. ರಾಜ್ಯಾದ್ಯಂತ ಖಾಸಗಿ ಲಾಬಿ ಇಡೀ ರಾಜ್ಯವನ್ನು ನಿಯಂತ್ರಿಸಲಿದೆ. ಇಲಾಖೆಗಳ ಕಾರ್ಯನಿರ್ವಹಣೆ ಮುಗಿದು ಹೋಗಲಿದೆ.
ಮಂಡ್ಯದ ಸಕ್ಕರೆ ಉತ್ಪನ್ನ ರಾಜ್ಯಕ್ಕೆಲ್ಲಾ ಸರಬರಾಜಾಗುತ್ತಿತ್ತು. ಆದರೆ, ಈಗ ಕೇಳುವವರಿಲ್ಲ. ಸರ್ಕಾರ ಪಡಿತರ ವಿತರಣೆಯಲ್ಲಿ ಸಕ್ಕರೆ ಬದಲು ಬೆಲ್ಲವನ್ನು ಪರಿಚಯಿಸಿ ಸಾವಯವ ಉತ್ಪನ್ನವನ್ನೇ ನೀಡಬೇಕೆಂದ್ರೆ ರೈತರು ಅದಕ್ಕೂ ಸಿದ್ಧವಾಗುತ್ತಾರೆ.
ಸಕ್ಕರೆ ಕಾರ್ಖಾನೆ ಉಳಿಸಲು ದೇಶದ ಬೇರೆ ರಾಜ್ಯ ಹಾಗೂ ವಿಶ್ವದ ಬೇರೆ ದೇಶಕ್ಕೆ ರಫ್ತು ಮಾಡಿ. ರೈತ ಬದುಕುತ್ತಾನೆ. ರಾಜ್ಯದ ಆಲೆಮನೆ ಸಂಸ್ಕ್ರತಿ ಮರಳಿ ಜೀವ ಪಡೆಯುತ್ತದೆ ಎಂದ ಅವರು, ನೆಲ, ಜಲ, ಭಾಷೆ ಬಗ್ಗೆ ನಿರ್ಲಕ್ಷ್ಯ ಆಗಿದೆ. ಏರ್ ಶೋನಲ್ಲಿ ಕನ್ನಡ ಮರೆಯಾಗಿತ್ತು. ತ್ರಿಭಾಷಾ ಸೂತ್ರ ಪಾಲನೆ ಆಗಿಲ್ಲ. ಹೊಸ ಶಿಕ್ಷಣ ನೀತಿ ಜಾರಿಗೆ ಬರಲಿದೆ ಎಂಬ ನಂಬಿಕೆ ಹುಸಿಯಾಗಿದೆ ಎಂದರು.
ಆರ್ಥಿಕತೆ ಕುಗ್ಗಿದರೂ, ಚೇತರಿಕೆ ಕಾಣುತ್ತಿದೆ : ಬಿಜೆಪಿ ಸದಸ್ಯ ಸಾಬಣ್ಣ ತಳವಾರ್ ಮಾತನಾಡಿ, ದೇಶ ಸಾಕಷ್ಟು ಅಡೆತಡೆ, ಪ್ರಕೃತಿ ವಿಕೋಪ ಎದುರಿಸಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ವಾಸಿ. ಆರ್ಥಿಕತೆ ಕುಗ್ಗಿದರೂ, ಚೇತರಿಕೆ ಕಾಣುತ್ತಿದೆ.
ವಲಸೆ ಕಾರ್ಮಿಕರಿಗೆ ಸಮಸ್ಯೆ ಎದುರಾಗಿತ್ತು. ಕೃಷಿ ಕ್ಷೇತ್ರ ಜನರ ಕೈಹಿಡಿದು ಸಹಾಯ ಮಾಡಿದೆ. ಗ್ರಾಮೀಣಾಭಿವೃದ್ಧಿ ಆಗಿದೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಆಗಬೇಕಿದೆ. ಅದು ಅತ್ಯಂತ ಹಿಂದುಳಿದಿದೆ. 371(ಜೆ) ಬಂದರೂ ಸಮರ್ಪಕವಾಗಿ ಜಾರಿಯಾಗಿಲ್ಲ. ಮುಂದಾದರೂ ಆಗಬೇಕಿದೆ ಎಂದರು.