ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೆಂದ್ರ ನೇತೃತ್ವದಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಕ್ಕಾಗಿ ನಡೆದ ಮೊದಲ ಸಭೆಯಲ್ಲೇ ಮಾತಿನ ಚಕಮಕಿ, ಕೆಲವರ ಹೆಸರಿಗೆ ಅಪಸ್ವರದಂತಹ ಘಟನೆಯಿಂದ ರಾಜ್ಯ ಬಿಜೆಪಿ ನಾಯಕರು ಕೆಲ ಕ್ಷಣ ಗಲಿಬಿಲಿಗೊಂಡರು. ಕೂಡಲೇ ಮಧ್ಯಪ್ರವೇಶ ಮಾಡಿದ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅಭ್ಯರ್ಥಿಗಳ ಆಯ್ಕೆಗೆ ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಬಂದಾಗ ಚರ್ಚಿಸೋಣ. ಈಗ ಕೇವಲ ವಸ್ತುಸ್ಥಿತಿ ಹಾಗೂ ಸಿದ್ಧತೆಗಳ ಕುರಿತು ಮಾತ್ರ ಅವಲೋಕನ ಮಾಡೋಣ ಎಂದು ಪರಿಸ್ಥಿತಿ ನಿಭಾಯಿಸಿದರು.
ಕೇಂದ್ರ ಸಚಿವ ಖೂಬಾ ವಿರುದ್ಧ ವಾಗ್ದಾಳಿ: ನಗರದ ಹೊರವಲಯದ ರಮಾಡ ರೆಸಾರ್ಟ್ನಲ್ಲಿ ಕ್ಲಸ್ಟರ್ ವಾರು ಲೋಕಸಭಾ ಕ್ಷೇತ್ರಗಳ ಸಭೆ ಆರಂಭವಾಗುತ್ತಿದ್ದಂತೆ ಕೇಂದ್ರ ಸಚಿವ ಭಗವಂತ ಖೂಬಾ ಸಮ್ಮುಖದಲ್ಲೇ ಖೂಬಾಗೆ ಟಿಕೆಟ್ ನೀಡದಂತೆ ಹಕ್ಕೊತ್ತಾಯ ಮಾಡಿದ ಘಟನೆ ನಡೆಯಿತು. ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಚರ್ಚೆ ಆರಂಭಿಸುತ್ತಿದ್ದಂತೆ ಕೇಂದ್ರ ಸಚಿವ ಭಗವಂತ ಖೂಬಾಗೆ ಈ ಬಾರಿ ಟಿಕೆಟ್ ನೀಡದಂತೆ ಆಗ್ರಹ ಕೇಳಿಬಂದಿತು.
ವಿಧಾನಸಭಾ ಚುನಾವಣೆಗೂ ಮೊದಲಿನಿಂದಲೂ ಕೇಂದ್ರ ಸಚಿವ ಖೂಬಾ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದ ಶಾಸಕ ಪ್ರಭು ಚವ್ಹಾಣ್ ಈಗ ಮತ್ತೊಂದು ಹಂತದ ಆಕ್ರೋಶವನ್ನು ವ್ಯಕ್ತಪಡಿಸಿದರು. ಖೂಬಾ ಅವರಿಗೆ ಈ ಬಾರಿ ಟಿಕೆಟ್ ನೀಡಿದಂತೆ ಆಗ್ರಹಿಸಿದರು. ಪ್ರಭು ಚವ್ಹಾಣ್ ಹೇಳಿಕೆಯನ್ನು ಶಾಸಕರಾದ ಶರಣು ಸಲಗಾರ್, ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ್ ಸಮರ್ಥಿಸಿಕೊಂಡು ಖೂಬಾ ವಿರುದ್ಧ ಧ್ವನಿ ಎತ್ತಿದರು.
ಈ ರೀತಿ ನಾಯಕರ ನಡುವೆಯೇ ತಮ್ಮ ವಿರುದ್ಧ ಹೇಳಿಕೆ ನೀಡಿದ್ದನ್ನು ಭಗವಂತ ಖೂಬಾ ಖಂಡಿಸಿದರು. ಈ ವೇಳೆ, ಖೂಬಾ ಮತ್ತು ಚವ್ಹಾಣ್ ನಡುವೆ ನೇರ ಮಾತಿನ ಚಕಮಕಿ ನಡೆಯಿತು. ಕೆಲ ಕಾಲ ರಾಜ್ಯದ ನಾಯಕರು ಪರಿಸ್ಥಿತಿ ನಿಯಂತ್ರಿಸಲಾಗದ ಸನ್ನಿವೇಶ ಕೂಡಾ ಎದುರಾಯಿತು. ನಾಯಕರ ಸಮ್ಮುಖದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಶಾಸಕರಿಗೆ ಎಚ್ಚರಿಕೆ ನೀಡದಿರುವುದರಿಂದ ಅಸಮಧಾನಗೊಂಡ ಕೇಂದ್ರ ಸಚಿವ ಭಗವಂತ ಖೂಬಾ ಬೇಸರದಿಂದಲೇ ಸಭೆಯಿಂದ ಹೊರನಡೆದರು.
ಪರಿಸ್ಥಿತಿ ತಿಳಿಗೊಳಿಸಿದ ಮಾಜಿ ಸಿಎಂ ಬಿಎಸ್ವೈ: ಸಭೆಯ ಆರಂಭದಲ್ಲೇ ಈ ರೀತಿ ಘಟನೆ ನಡೆದಿದ್ದರಿಂದ ಕಸಿವಿಸಿಗೊಂಡ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಇತರ ಕ್ಷೇತ್ರಗಳ ಚರ್ಚೆಯ ವೇಳೆಯಲ್ಲಿಯೂ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಹಿನ್ನಲೆಯಲ್ಲಿ ಇದು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಭೆಯಲ್ಲ. ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಅಭಿಪ್ರಾಯ ಸಂಗ್ರಹ ಮಾಡುತ್ತಿಲ್ಲ. ಕೇವಲ ಕ್ಷೇತ್ರಗಳ ಪರಿಸ್ಥಿತಿಯ ಅವಲೋಕನ ಮಾಡುವ ಸಭೆಯಾಗಿದೆ. ಹಾಗಾಗಿ ಯಾವುದೇ ನಾಯಕರು ಕೂಡ ಅಭ್ಯರ್ಥಿಗಳ ವಿಚಾರದಲ್ಲಿ ಪರ ವಿರೋಧದಂತಹ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಿದರು.
ಹಾಲಿ ಸಂಸದರ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಸಂಸದರ ಮರು ಸ್ಪರ್ಧೆ ವಿಚಾರವನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸ್ಥಳೀಯ ನಾಯಕರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುತ್ತದೆ. ಈ ಸಭೆಯ ನಂತರ ಎಲ್ಲ ಕ್ಷೇತ್ರಗಳಿಗೂ ವೀಕ್ಷಕರ ತಂಡ ಬಂದು ಅಭಿಪ್ರಾಯ ಸಂಗ್ರಹ ಮಾಡಲಿದೆ. ಪ್ರತಿಯೊಂದು ಕ್ಷೇತ್ರಕ್ಕೂ ಬಂದು ಅಲ್ಲಿಯೇ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಅಲ್ಲಿಯ ಸಭೆಯಲ್ಲಿ ಅಭ್ಯರ್ಥಿಗಳ ವಿಚಾರದ ಕುರಿತು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಈಗ ಯಾವುದೇ ಅಭ್ಯರ್ಥಿಯ ಕುರಿತು ಮಾತನಾಡಬೇಡಿ ಎಂದು ಸ್ಪಷ್ಟ ನಿರ್ದೇಶನ ನೀಡಿದರು.
ಖುದ್ದು ಯಡಿಯೂರಪ್ಪ ಅವರೇ ಈ ಹೇಳಿಕೆ ನೀಡಿದ್ದರಿಂದಾಗಿ ಇಂದು ಮತ್ತು ನಾಳೆ ನಡೆಯಲಿರುವ ಲೋಕಸಭಾ ಕ್ಷೇತ್ರವಾರು ಸಭೆಯನ್ನು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅಭಿಪ್ರಾಯ ಸಂಗ್ರಹದ ವಿಚಾರದಿಂದ ಹೊರಗಿಡುವ ನಿರ್ಣಯಕ್ಕೆ ಬಂದು ಕೇವಲ ಕ್ಷೇತ್ರಗಳ ಸ್ಥಿತಿಗತಿ ಕುರಿತು, ಸಂಘಟನೆ ಕುರಿತು ಅವಲೋಕನಕ್ಕೆ ಸೀಮಿತವಾಗಿ ನಡೆಸುವಂತಾಯಿತು. ಈ ಕುರಿತು ಮಾಜಿ ಸಿಎಂ ಡಿ.ವಿ ಸದಾನಂದಗೌಡ ಮಾಹಿತಿ ನೀಡಿದ್ದು, ಬೆಳಗ್ಗೆಯೇ ನಾವು ನಾಯಕರಿಗೆ ಸೂಚನೆ ನೀಡಿದ್ದೆವು. ಯಾವುದೇ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಬಾರದು ಅಂತ ತಿಳಿಸಿದ್ದೇವೆ ಎಂದರು. ಆದರೆ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಅಸಮಾಧಾನ ಸ್ಟೋಟವಾದ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ಎರಡು, ಮೂರು ಹಂತದ ಸರ್ವೆ ಮಾಡಲಾಗಿದೆ. ಸರ್ವೆ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಐವರು ಸಂಸದರು ಗೈರು: ಚುನಾವಣಾ ನಿವೃತ್ತಿ ಘೋಷಿಸಿರುವ ತುಮಕೂರು ಸಂಸದ ಜಿ.ಎಸ್. ಬಸವರಾಜ್ ಹಾಗೂ ಚುನಾವಣಾ ನಿವೃತ್ತಿ ಘೋಷಿಸುವ ನಿರ್ಧಾರಕ್ಕೆ ಬಂದಿರುವ ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್, ಪುತ್ರನ ಪ್ರಕರಣದಿಂದ ವಿಚಲಿತರಾಗಿರುವ ಬಳ್ಳಾರಿ ಸಂಸದ ದೇವೇಂದ್ರಪ್ಪ, ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ ಹಾಗೂ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಇಂದಿನ ಸಭೆಗೆ ಗೈರಾಗಿದ್ದರು.
ಈಗಾಗಲೇ ಚುನಾವಣಾ ನಿವೃತ್ತಿ ಘೋಷಿಸಿರುವ ಸಂಸದ ಬಸವರಾಜ್ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ ದೇವೇಗೌಡ ಸ್ಪರ್ಧೆಗೆ ಬಹಿರಂಗ ವಿರೋಧ ವ್ಯಕ್ತಪಡಿಸಿದ್ದು, ಪಕ್ಷದ ಜೊತೆ ಇದ್ದ ನಿಕಟತೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ. ಹಾಗಾಗಿ ಅವರು ಈ ಸಭೆಗೆ ಬಂದಿಲ್ಲ ಎನ್ನಲಾಗಿದೆ. ಇನ್ನು ಶ್ರೀನಿವಾಸ ಪ್ರಸಾದ್ ಪಕ್ಷದಿಂದ ಅಂತರ ಕಾಯ್ದುಕೊಳ್ಳದೇ ಇದ್ದರೂ ವಯಸ್ಸಿನ ಕಾರಣದಿಂದಾಗಿ ಗೈರಾಗಿದ್ದಾರೆ. ಈ ಬಾರಿ ತಮ್ಮ ಬದಲು ತಮ್ಮ ಅಳಿಯನಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ. ಇನ್ನು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಬಿ.ಎನ್. ಬಚ್ಚೇಗೌಡ ನಿರೀಕ್ಷೆಯಂತೆ ಪಕ್ಷದ ಸಭೆಗೆ ಆಗಮಿಸಿಲ್ಲ.
ಎಂಟಿಬಿ ನಾಗರಾಜ್ ಬಿಜೆಪಿಗೆ ಬಂದ ನಂತರ ಪುತ್ರನ ರಾಜಕೀಯ ಭವಿಷ್ಯಕ್ಕೆ ಪಕ್ಷದಲ್ಲಿ ಮನ್ನಣೆ ಸಿಗದಿದ್ದರಿಂದ ಮುನಿಸಿಕೊಂಡು ಅಂತರ ಕಾಯ್ದುಕೊಂಡಿದ್ದು, ಪಕ್ಷದ ಎಲ್ಲ ಸಭೆಗಳಿಂದ ಮತ್ತು ಪಕ್ಷದ ನಾಯಕರಿಂದ ದೂರ ಉಳಿದಿದ್ದಾರೆ. ಅದರಂತೆ ಇಂದಿನ ಸಭೆಗೂ ಆಗಮಿಸಲಿಲ್ಲ. ದೇವೇಂದ್ರಪ್ಪ ವಿರುದ್ಧ ಸ್ಥಳೀಯ ನಾಯಕರಲ್ಲಿ ಅಸಮಾಧಾನ ಇರುವುದು ಒಂದು ಕಡೆಯಾದರೆ, ಪುತ್ರನ ಪ್ರಕರಣದಿಂದ ವಿಚಲಿತರಾಗಿರುವ ಸಂಸದ ದೇವೇಂದ್ರಪ್ಪ ಗೈರಾಗಿದ್ದಾರೆ ಎನ್ನಲಾಗಿದೆ. ಆದರೆ, ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಗೈರು ಹಾಜರಾಗಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ: ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು: ಬಿಜೆಪಿ ನಾಯಕರಿಂದ ವಾಗ್ದಾಳಿ