ಬೆಂಗಳೂರು: ಬುಧವಾರದ ನಂತರ ಬೆಂಗಳೂರಿನಲ್ಲಿ ಲಾಕ್ಡೌನ್ ಇರುವುದಿಲ್ಲ. ಈ ಬಗ್ಗೆ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಸಭೆ ನಂತರ ಮಾತನಾಡಿದ ಅವರು, ಬುಧವಾರ ಬೆಳಗ್ಗೆ ಲಾಕ್ಡೌನ್ ಮುಕ್ತಾಯವಾಗಲಿದೆ. ನಂತರ ಈ ಹಿಂದೆ ಇದ್ದ ರೀತಿಯಲ್ಲಿಯೂ ಕೊರೊನಾ ಮಾರ್ಗಸೂಚಿಯಂತೆ ಜನಜೀವನಕ್ಕೆ ಅವಕಾಶವಿರಲಿದೆ. ಭಾನುವಾರದ ಲಾಕ್ಡೌನ್ ಹಾಗೂ ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆ ವರೆಗೆ ಕರ್ಫ್ಯೂ ಮುಂದುವರೆಯಲಿದೆ. ಈ ಬಗ್ಗೆ ನಾಳೆ ಅಧಿಕೃತ ಆದೇಶ ಹೊರಬೀಳಲಿದೆ ಎಂದರು.
ಇಂದಿನ ಸಭೆಯಲ್ಲಿ ವಲಯವಾರು ಉಸ್ತುವಾರಿಗಳಿಂದ ಸವಿಸ್ತಾರವಾದ ಮಾಹಿತಿಯನ್ನು ಸಿಎಂ ಪಡೆದುಕೊಂಡಿದ್ದಾರೆ. ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಲಯವಾರು ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ. ಆಯಾ ವಲಯದ ಉಸ್ತುವಾರಿ ಸಚಿವರು ಹಾಗೂ ಶಾಸಕರ ಸಭೆ ನಡೆಸಿ ಸಮಗ್ರವಾದ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಎನ್ ಹೆಚ್ ಎಂ ಅಡಿ ಕೆಲಸ ಮಾಡುವ ವೈದ್ಯರು ಮತ್ತು ಸಿಬ್ಬಂದಿಗೆ 25 ಸಾವಿರ ಇದ್ದ ವೇತನವನ್ನು 45 ಸಾವಿರಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರದಿಂದಲೇ ವೇತನ ನೀಡಲು ನಿರ್ಧರಿಸಲಾಗಿದೆ. ವೈದ್ಯಕೀಯ ಪರಿಕರಗಳ ಖರೀದಿ ಅವ್ಯವಹಾರ ಆರೋಪ ಕುರಿತು ಇಂದು ಸಚಿವ ಶ್ರೀರಾಮುಲು ಹಾಗೂ ಡಿಸಿಎಂ ಅಶ್ವತ್ಥನಾರಾಯಣ್ ಜಂಟಿ ಸುದ್ದಿಗೋಷ್ಟಿ ನಡೆಸಿ ಸಮಗ್ರ ಮಾಹಿತಿ ನೀಡಿದ್ದಾರೆ. ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುದ್ದಿಗೋಷ್ಟಿ ನಡೆಸಿ, ನಾಡಿನ ಜನತೆಯ ಮುಂದೆ ಏನೇನು ಖರೀದಿ ಆಗಿದೆ,ಎಷ್ಟು ವೆಚ್ಚ ಮಾಡಲಾಗಿದೆ ಎನ್ನುವ ವಿವರ ಬಹಿರಂಗಪಡಿಸಲಿದ್ದಾರೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.