ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅಧಿಕಾರ ವಹಿಸಿಕೊಂಡ ತಕ್ಷಣವೇ ಪಕ್ಷದ ಮಾಧ್ಯಮ ಮುಖ್ಯಸ್ಥರ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ಸಿಗ ಬಿ ಎಲ್ ಶಂಕರ್ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಲಾಗಿತ್ತು. ಶಂಕರ್ ಹಾಗೂ ಶಿವಕುಮಾರ ಇಬ್ಬರೂ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅನುಯಾಯಿಗಳಾಗಿದ್ದವರು. ಈ ಆಯ್ಕೆಯಲ್ಲಿ ಅತ್ಯಂತ ಪ್ರಮುಖ ಮಾನದಂಡವಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಶಿವಕುಮಾರ್ ಅಧ್ಯಕ್ಷಗಾದಿಗೆ ಏರಿ ಕೆಲ ಸಮಯ ಕಳೆಯುವುದರಲ್ಲಿಯೇ ಕೊರೊನಾ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಬಿ ಎಲ್ ಶಂಕರ್ ಆಯ್ಕೆ ಕೂಡ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ.
![Lockdown Risk for BL Shankar Selection](https://etvbharatimages.akamaized.net/etvbharat/prod-images/6660033_599_6660033_1586001504152.png)
ಶಂಕರ್ ಆಯ್ಕೆಗೆ ಕಾರಣ : ಪ್ರಸ್ತುತ ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಬಿ ಎಲ್ ಶಂಕರ್ ಎಐಸಿಸಿ ಸದಸ್ಯರು ಆಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ 4ನೇ ಅವಧಿಗೆ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಎಸ್ ಎಂ ಕೃಷ್ಣ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಇವರು ಕೃಷ್ಣ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರೂ ಅವರೊಂದಿಗೆ ಹೋಗದೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದು ತಮ್ಮ ನಿಷ್ಠೆ ತೋರಿಸಿದ್ದರು. ಪಕ್ಷದ ಪರ ಹಲವು ಹಂತಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದಲ್ಲದೆ ಡಿಕೆಶಿ ಅವರ ಆಪ್ತವಲಯದಲ್ಲಿ ಮತ್ತು ಹೈಕಮಾಂಡ್ ಜೊತೆಗೂ ಬಾಂಧವ್ಯ ಹೊಂದಿದ್ದಾರೆ. ಈ ಹಿನ್ನೆಲೆ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಇವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನೇನು ಅಧಿಕೃತ ಘೋಷಣೆ ಹೊರ ಬೀಳಲಿದೆ ಎನ್ನುವ ಸಂದರ್ಭದಲ್ಲಿಯೇ ದೇಶ ಲಾಕ್‌ಡೌನ್ ಆದ ಹಿನ್ನೆಲೆ ಅವರ ಆದೇಶ ಕಾಯ್ದಿರಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಆಯ್ಕೆಯಾದ ಸಂದರ್ಭ ರಿಜ್ವಾನ್ ಅರ್ಷದ್ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದರು. ವರ್ಷದ ಬಳಿಕ ಇವರ ಸ್ಥಾನಕ್ಕೆ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರನ್ನ ನೇಮಿಸಲಾಗಿದೆ. ಹಾಲಿ ಅವರೆ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾರೇ ಹೊಸ ಅಧ್ಯಕ್ಷರು ನೇಮಕವಾದರೂ ತಮ್ಮವರನ್ನು ಆಯಕಟ್ಟಿನ ಸ್ಥಾನಗಳಿಗೆ ನೇಮಿಸಿಕೊಳ್ಳುವುದು ಸಾಮಾನ್ಯವಾಗಿರುವ ಹಿನ್ನೆಲೆ ಉಗ್ರಪ್ಪ ಸ್ಥಾನ ಕಳೆದುಕೊಳ್ಳಲಿದ್ದಾರೆ. ಈ ಸ್ಥಾನಕ್ಕೆ ಬಿ ಎಲ್ ಶಂಕರ್ ನೇಮಕವಾಗಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.