ಬೆಂಗಳೂರು : ಲಾಕ್ಡೌನ್ ಹಿನ್ನೆಲೆ ಹೋಟೆಲ್ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಸಣ್ಣಪುಟ್ಟ ಹೋಟೆಲ್, ದರ್ಶಿನಿಗಳು ಅಲ್ಲಲ್ಲಿ ಆರಂಭಗೊಳ್ಳುತ್ತಿವೆ. ಸರ್ಕಾರದ ಸೂಚನೆಯಂತೆ ಪಾರ್ಸೆಲ್ ಸೇವೆ ಒದಗಿಸುತ್ತಿದ್ದು, ಆರ್ಥಿಕೆ ಹಾದಿಗೆ ಮರಳುವ ಉತ್ಸಾಹದಲ್ಲಿವೆ.
ಲಾಕ್ಡೌನ್ ಘೋಷಣೆಯಾದ ಆರಂಭದಲ್ಲೇ ಟೇಕ್ ಅವೇ ವ್ಯವಸ್ಥೆಯಲ್ಲಿ ಹೋಟೆಲ್ ತೆರೆಯಲು ಸರ್ಕಾರ ಅವಕಾಶ ನೀಡಿತ್ತಾದರೂ ಯಾರೂ ಹೋಟೆಲ್ ಬಾಗಿಲು ತೆಗೆಯುವ ಮನಸ್ಸು ಮಾಡಿರಲಿಲ್ಲ. ಇದೀಗ 2ನೇ ಬಾರಿಯ ಲಾಕ್ಡೌನ್ ಮುಕ್ತಾಯದ ಹಂತಕ್ಕೆ ಬಂದಿದ್ದು, ಕೆಲ ನಿಯಮಗಳು ಸಡಿಲಿಕೆಯಾದ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಹೋಟೆಲ್ಗಳು, ದರ್ಶಿನಿಗಳು ಆರಂಭಗೊಂಡಿವೆ.
ಶಾಪಿಂಗ್ ಮಾಲ್ಗಳು, ಕಮರ್ಷಿಯಲ್ ಏರಿಯಾದಲ್ಲಿ ಹೋಟೆಲ್‌ಗಳನ್ನು ತೆರೆಯದೇ ಜನವಸತಿ ಪ್ರದೇಶಗಳಲ್ಲಿ ಹೋಟೆಲ್‌ಗಳನ್ನು ತೆರೆಯಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಪಾರ್ಸೆಲ್ ಸೇವೆ ಒದಗಿಸಲಾಗುತ್ತಿದೆ. ಲಾಕ್ಡೌನ್ ಎಂದು ದರ ಹೆಚ್ಚಿಸದೇ ಈ ಹಿಂದೆ ಇದ್ದಷ್ಟೇ ದರ ವಿಧಿಸಲಾಗುತ್ತಿದೆ. ಇಡ್ಲಿ, ವಡೆ, ದೋಸೆ, ಪುಲಾವ್ ಹೀಗೆ ಹಲವು ಬಗೆಯ ಸಸ್ಯಹಾರಿ, ಬಿರಿಯಾನಿ ರೀತಿಯ ಮಾಂಸಹಾರಿ ತಿನಿಸುಗಳನ್ನೂ ಪಾರ್ಸೆಲ್ ಕೊಡಲಾಗುತ್ತಿದೆ.
ಸಣ್ಣಪುಟ್ಟ ಹೋಟೆಲ್ ವರ್ತಕರು ಕಟ್ಟಡದ ಬಾಡಿಗೆ ಕಟ್ಟಲೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜೀವನೋಪಾಯಕ್ಕಾಗಿ ಕೊರೊನಾ ಭೀತಿ ನಡುವೆಯೂ ಹೋಟೆಲ್‌ಗಳನ್ನು ಆರಂಭಿಸಲಾಗಿದೆ. ಕೆಲಸಗಾರರು ಸಿಗದೇ ಇದ್ದರೂ ಮನೆಯಲ್ಲಿದ್ದ ಸದಸ್ಯರೇ ಸೇರಿ ಹೋಟೆಲ್ ನಡೆಸಲು ಶುರು ಮಾಡುತ್ತಿದ್ದಾರೆ. ಮನೆ ನಡೆಸಲು, ಸಾಲದ ಕಂತುಗಳ ಪಾವತಿಸಲು ಹೋಟೆಲ್ಗಳನ್ನೇ ನಂಬಿರುವ ಬಹುತೇಕರು ಇದೀಗ ನಿಧಾನಕ್ಕೆ ಹೋಟೆಲ್‌ಗಳನ್ನು ತೆರೆಯುತ್ತಿದ್ದಾರೆ. ಕಡಿಮೆ ಸಿಬ್ಬಂದಿಯೊಂದಿಗೆ ಸೇವೆ ಒದಗಿಸುತ್ತಿದ್ದಾರೆ.
ಸಾಕಷ್ಟು ಸಂಖ್ಯೆಯಲ್ಲಿ ಹೋಟೆಲ್ಗಳು ಮುಚ್ಚಿರುವ ಕಾರಣ ಬಾಗಿಲು ತೆರೆದಿರುವ ಕೆಲವೇ ಹೋಟೆಲ್ಗಳಿಗೆ ಗ್ರಾಹಕರು ಮುಗಿಬೀಳುತ್ತಿದ್ದಾರೆ. ಇದರಿಂದ ನಿರೀಕ್ಷೆಗೂ ಮೀರಿದ ಆದಾಯವನ್ನು ಹೋಟೆಲ್ ಮಾಲೀಕರು ಗಳಿಸುತ್ತಿದ್ದಾರೆ. ಮೇ 3ರಂದು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ದೊಡ್ಡ ದೊಡ್ಡ ಹೋಟೆಲ್ಗಳ ಭವಿಷ್ಯ ನಿಂತಿದೆ. ಸಿಬ್ಬಂದಿ ವೇತನ, ಹೋಟೆಲ್ ನಿರ್ವಹಣೆ ವೆಚ್ಚಕ್ಕೆ ಅನುಗುಣವಾಗಿ ಈಗ ಹೋಟೆಲ್ ವ್ಯಾಪಾರ ನಡೆಯುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮ ಚೇತರಿಸಿಕೊಳ್ಳಲು ಸುಮಾರು ಆರು ತಿಂಗಳ ಸಮಯ ಬೇಕಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.