ಬೆಂಗಳೂರು: ಆಟೋ ರಿಕ್ಷಾಗಳು ಸಿಲಿಕಾನ್ ಸಿಟಿಯ ಜೀವನಾಡಿ. ಒಂದೆಡೆಯಿಂದ ಇನ್ನೊಂದೆಡೆ ಸಂಚರಿಸಲು ಸಾರಿಗೆ ಬಸ್ಗಳನ್ನು ಬಿಟ್ಟರೆ ನಗರದ ಜನ ಹೆಚ್ಚಾಗಿ ಆಟೋಗಳನ್ನೇ ಆಶ್ರಯಿಸುತ್ತಾರೆ. ಇಂತಹ ಆಟೋ ಚಾಲಕರ ಬದುಕು ಕೊರೊನಾ ಆವರಿಸಿಕೊಂಡ ಬಳಿಕ ಮೂರಾಬಟ್ಟೆಯಾಗಿದೆ.
ಲಾಕ್‌ಡೌನ್ ಸಡಿಲಿಕೆಯಾಗಿ ನಗರ ಸಹಜ ಸ್ಥಿತಿಗೆ ಮರಳಿದರೂ ಆಟೋ ಚಾಲಕರಿಗೆ ಮಾತ್ರ ಗ್ರಾಹಕರು ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಜನರ ಮನಸ್ಸಿನಲ್ಲಿರುವ ಕೊರೊನಾ ಭೀತಿ. ಆಟೋ ಹತ್ತಿದರೆ ಎಲ್ಲಿ ನಮಗೆ ಕೊರೊನಾ ತಗುಲುತ್ತೋ? ಎಂಬ ಭಯದಿಂದ ಜನ ಆಟೋಗಳಲ್ಲಿ ಓಡಾಡುವುದನ್ನೇ ಕಡಿಮೆ ಮಾಡಿದ್ದಾರೆ. ಹೀಗಾಗಿ ಗ್ರಾಹಕರನ್ನೇ ನಂಬಿದ್ದ ಚಾಲಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ನಡುವೆ ಫೈನಾನ್ಶಿಯರ್ಗಳ ಕಿರುಕುಳ ಆಟೋ ಚಾಲಕರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಕೊರೊನಾ ಹೊಡೆತಕ್ಕೆ ಸಿಲುಕಿ ಬಳಲಿ ಬೆಂಡಾಗಿರುವ ಚಾಲಕರಿಗೆ ಸಾಲ ನೀಡಿದ್ದ ಫೈನಾನ್ಶಿಯರ್ಗಳು ಹಣ ವಸೂಲಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ, ಮೊದಲೇ ಗ್ರಾಹಕರಿಲ್ಲದೆ ಸಂಕಷ್ಟದಲ್ಲಿರುವ ಹೆಚ್ಚಿನ ಆಟೋ ಚಾಲಕರು, ಫೈನಾನ್ಶಿಯರ್ಗಳ ಕಿರುಕುಳ ತಾಳಲಾರದೆ ಆಟೋ ಓಡಿಸುವುದನ್ನೇ ಬಿಟ್ಟು ತಮ್ಮೂರುಗಳನ್ನು ಸೇರಿದ್ದಾರೆ.
ಸರ್ಕಾರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 7.75 ಲಕ್ಷ ಆಟೋ ಹಾಗೂ ಟ್ಯಾಕ್ಸಿ ಚಾಲಕರಿದ್ದಾರೆ. ಈ ಪೈಕಿ ಬೆಂಗಳೂರು ಮಹಾನಗರದಲ್ಲೇ ಸುಮಾರು 2 ಲಕ್ಷ ಆಟೋ ಚಾಲಕರಿದ್ದಾರೆ. ಲಾಕ್ಡೌನ್ಗೂ ಮುನ್ನ ಈ ಆಟೋ ಚಾಲಕರು ಪ್ರತೀ ದಿನ ಸರಾಸರಿ 800 ರಿಂದ 1 ಸಾವಿರ ರೂ.ಯವರೆಗೆ ಸಂಪಾದನೆ ಮಾಡುತ್ತಿದ್ದರು. ಆದರೆ, ಈಗ 200 ರಿಂದ 300 ರೂ. ದುಡಿಯುವುದೂ ಇವರಿಗೆ ಕಷ್ಟವಾಗಿದೆ. ಕೊರೊನಾ ಭಯದಿಂದ ಗ್ರಾಹಕರ ಕೊರತೆ ಒಂದೆಡೆಯಾದರೆ, ಸಿನಿಮಾ, ಕ್ಲಬ್, ರೆಸ್ಟೋರೆಂಟ್, ಐಟಿ-ಬಿಟಿ ಕಂಪನಿ, ಗಾರ್ಮೆಂಟ್ಸ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದಿರುವುದು, ಶಾಲಾ- ಕಾಲೇಜು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳ ಚಟುವಟಿಕೆಗಳು ಸ್ಥಗಿತಗೊಂಡಿರುವುದು ಮತ್ತು ನಗರಕ್ಕೆ ಹೊರ ರಾಜ್ಯದಿಂದ ಪ್ರವಾಸಿಗರು ಬಾರದೆ ಇರುವುದು ಆಟೋ ಚಾಲಕರಿಗೆ ಗ್ರಾಹಕರ ಕೊರತೆಯಾಗಲು ಪ್ರಮುಖ ಕಾರಣವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ, ಒಂದು ಬಾಡಿಗೆಗಾಗಿ ಎರಡರಿಂದ ಮೂರು ಗಂಟೆಗಳ ಚಾಲಕರು ಆಟೋ ಸ್ಟ್ಯಾಂಡ್ನಲ್ಲಿ ಕಾಯಬೇಕಾಗಿದೆ. ಐಟಿ-ಬಿಟಿ ಕಂಪೆನಿಗಳಿರುವ ವೈಟ್ ಫೀಲ್ಡ್, ಮಾನ್ಯತಾ ಟೆಕ್ ಪಾರ್ಕ್, ಸಿಲ್ಕ್ ಬೋರ್ಡ್, ಮಾರತ್ ಹಳ್ಳಿ, ಬೆಳ್ಳಂದೂರು, ಕೈಗಾರಿಕಾ ಪ್ರದೇಶಗಳಾದ ಪೀಣ್ಯ, ಯಶವಂತಪುರ, ರಾಜಾಜಿನಗರ, ಮೈಸೂರು ರೋಡ್ ಸೇರಿದಂತೆ ವಿವಿಧ ಕಡೆಗಳಲ್ಲಿ ಆಟೋ ಸೇವೆಯಲ್ಲಿ ವ್ಯತ್ಯಯವಾಗಿದೆ. ಗಂಟೆಗಟ್ಟಲೆ ಕಾದರೂ ಬಾಡಿಗೆ ಸಿಗದೆ ಚಾಲಕರು ಪರದಾಡುತ್ತಿದ್ದಾರೆ.
ಎಲ್ಲಾ ಆಟೋ ಚಾಲಕರಿಗೆ ಪರಿಹಾರ ಸಿಕ್ಕಿಲ್ಲ!
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪ್ರತೀ ಆಟೋ ಚಾಲಕರಿಗೆ 5 ಸಾವಿರ ರೂಪಾಯಿಯಂತೆ ರಾಜ್ಯದ 7.75 ಲಕ್ಷ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ 387 ಕೋಟಿ ರೂ. ರಾಜ್ಯ ಸರ್ಕಾರ ಮೀಸಲಿಟ್ಟಿದೆ. ಪರಿಹಾರ ಪ್ಯಾಕೇಜ್ ಘೋಷಣೆಯಾಗಿ ಮೂರು ತಿಂಗಳು ಕಳೆದರೂ ಎಲ್ಲರಿಗೂ ಈ ಸೌಲಭ್ಯ ಸಿಕ್ಕಿಲ್ಲ. ಸರ್ಕಾರ ಘೋಷಿಸಿರುವ ಹಣದ ಪೈಕಿ 20 ಕೋಟಿ ರೂ. ಅನುದಾನ ಮಾತ್ರ ಬಿಡುಗಡೆಯಾಗಿದೆ. ಪರಿಹಾರ ಧನ ಕೋರಿ ಸರ್ಕಾರಕ್ಕೆ ಸಲ್ಲಿಸಲಾಗಿರುವ ಅರ್ಜಿಗಳ ಪೈಕಿ ವಿವಿಧ ಕಾರಣಗಳಿಂದಾಗಿ 23 ಸಾವಿರ ಚಾಲಕರ ಅರ್ಜಿ ತಿರಸ್ಕೃತಗೊಂಡಿದೆ. ಒಟ್ಟು1.20 ಲಕ್ಷ ಅರ್ಜಿದಾರರಿಗೆ ಸುಮಾರು 60 ಕೋಟಿಯಷ್ಟು ಹಣ ಬರಬೇಕಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸರ್ಕಾರದಿಂದ ಹಣಬಂದಿಲ್ಲ ಎಂದು ಹೇಳುತ್ತಾರೆ.
ಇನ್ನೊಂದೆಡೆ, ಸೇವಾ ಸಿಂಧು ವೆಬ್ಸೈಟ್ನಲ್ಲಿ ಪರಿಹಾರ ಧನದ ಅರ್ಜಿ ತೆಗೆದು ಹಾಕಲಾಗಿದೆ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ದೃಷ್ಟಿಯಿಂದ ಅರ್ಜಿ ಕಾಲಂ ತೆಗೆದು ಹಾಕಲಾಗಿದೆ ಎಂಬ ಉತ್ತರ ಸರ್ಕಾರದಿಂದ ಬಂದಿದೆ. ಇದರಿಂದ ಆಟೋ ಚಾಲಕರ ಮನೆಯ ಹಾಗೂ ಮನಸ್ಸಿನ ಪರಿಸ್ಥಿತಿ ಹದಗೆಟ್ಟಿದೆ ಎಂದು ಆದರ್ಶ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಬೇಸರದಿಂದ ಹೇಳಿದ್ದಾರೆ.
ಆಟೋ ಚಾಲಕರು ಹೇಳುವುದೇನು?
''ಕೊರೊನಾಪೂರ್ವದಲ್ಲಿ ಒಳ್ಳೆಯ ಬ್ಯುಸಿನೆಸ್ ನಡೆಯುತಿತ್ತು, ಕೊರೊನಾ ಲಾಕ್ ಡೌನ್ ಬಳಿಕ ಗ್ರಾಹಕರು ಆಟೋ ಹತ್ತುವುದಕ್ಕೆ ಭಯ ಬೀಳುತ್ತಿದ್ದಾರೆ. ದಿನಕ್ಕೆ 100 ರೂಪಾಯಿ ಸಂಪಾದನೆ ಮಾಡೋದು ಕಷ್ಟವಾಗಿದೆ. ಇದನ್ನು ನಂಬಿಕೊಂಡು ಸಂಸಾರ ಹೇಗೆ ಮಾಡಲಿ..? ಸರ್ಕಾರದಿಂದ ಐದು ಸಾವಿರ ಪರಿಹಾರ ಧನ ಬಂದಿದೆ. ಆದರೆ, ಫೈನಾನ್ಶಿಯರ್ಗಳ ಕಾಟ ಹೆಚ್ಚಾಗಿದೆ. ಅಲ್ಲಲ್ಲಿ ಆಟೊ ಸೀಜ್ ಮಾಡುತ್ತಿದ್ದಾರೆ. ಕೊರೊನಾ ಅವಧಿ ಮುಗಿಯುವ ತನಕ ಬಲವಂತವಾಗಿ ಸಾಲ ವಸೂಲಿ ಮಾಡದಂತೆ ಫೈನಾನ್ಶಿಯರ್ಗಳಿಗೆ ಸರ್ಕಾರ ಹೇಳಬೇಕು'' ಎನ್ನುತ್ತಾರೆ ಮಹಾಲಕ್ಷ್ಮೀ ಲೇಔಟ್ ನಿವಾಸಿಯಾಗಿರುವ ಆಟೋ ಚಾಲಕ ರಂಗನಾಥ್.
ಆಟೋ ಚಾಲಕರ ಬೇಡಿಕೆಗಳೇನು..?
ಎಲ್ಲಾ ಆಟೋ ಚಾಲಕ ಹಾಗೂ ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ಪರಿಹಾರ ಧನ ನೀಡಲು ಕ್ರಮ ಕೈಗೊಳ್ಳಬೇಕು. ಸದ್ಯಕ್ಕೆ, ಫೈನಾನ್ಶಿಯರ್ಗಳು ಸಾಲ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂಬುವುದು ಆಟೋ ಚಾಲಕರ ಕೋರಿಕೆಯಾಗಿದೆ.