ಬೆಂಗಳೂರು : ಹೋಟೆಲ್ ಉದ್ಯಮದ ಮೇಲೆ ಯಾವುದೇ ಪರಿಣಾಮ ಬೀರದಂತೆ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕಾಗಿದೆ. ಕಳೆದ ಬಾರಿ ಲಾಕ್ಡೌನ್ ಆದಾಗ ಸರ್ಕಾರವಾಗಲಿ, ಯಾವುದೇ ಇಲಾಖೆಯಿಂದಾಗಲಿ ನಮ್ಮ ಉದ್ಯಮ ಉಳಿಸುವಂತಹ ಕಾರ್ಯವಾಗಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಯವರಿಗೆ ತಿಳಿಸಿದ್ದೇವೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದರು.
ಕೊರೊನಾ 2ನೇ ಅಲೆ ಜಗತ್ತಿನಾದ್ಯಂತ ಜೀವ ಜಗತ್ತನ್ನು ಮತ್ತೆ ತತ್ತರಿಸುವಂತೆ ಮಾಡಿದೆ. ಕಳೆದ ವರ್ಷದ ಲಾಕ್ಡೌನ್ನಿಂದ ಎಲ್ಲಾ ಉದ್ಯಮಗಳು ತತ್ತರಿಸಿವೆ. ಇದೀಗ ಮತ್ತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.
ಈ ಹಿನ್ನೆಲೆ ಪ್ರತಿಕ್ರಿಯಿಸಿರುವ ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ ಸಿ ರಾವ್, ಕೋವಿಡ್ ಎರಡನೇ ಅಲೆ ಶುರುವಾಗಿದೆ. ಈಗಾಗಲೇ ಬಹಳಷ್ಟು ಉದ್ಯಮಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಅದರಲ್ಲೂ ನಮ್ಮ ಹೋಟೆಲ್ ಉದ್ಯಮಕ್ಕೆ ಅತಿ ಹೆಚ್ಚು ಹೊಡೆತ ಬಿದ್ದಿದೆ ಎಂದು 'ಈಟಿವಿ ಭಾರತ'ಕ್ಕೆ ತಿಳಿಸಿದರು.
ರೈತರು ಬೆಳೆಯುವ ತರಕಾರಿಗಳು, ಹಣ್ಣು-ಹಂಪಲುಗಳಿಗೆ ಉತ್ತಮ ಬೆಲೆಗಳನ್ನು ಕೊಟ್ಟು ಸಹಕರಿಸುತ್ತಿರುವ ಹಾಗೂ ಲಕ್ಷಾಂತರ ಜನ ಅವಿದ್ಯಾವಂತರಿಗೆ ಉದ್ಯೋಗ ಕೊಟ್ಟು ಪ್ರೋತ್ಸಾಹಿಸುವ ಕೆಲಸ ಹೋಟೆಲ್ಗಳು ಮಾಡುತ್ತಿವೆ. ಸಾರ್ವಜನಿಕರಿಗೆ ಕುಡಿಯಲು ಬಿಸಿನೀರು ಮತ್ತು ಶೌಚಾಲಯ ವ್ಯವಸ್ಥೆ ಉಚಿತವಾಗಿ ಒದಗಿಸುತ್ತೇವೆ. ಹೋಟೆಲ್ ಉದ್ಯಮದ ಮೇಲೆ ಹಲವಾರು ಇಲಾಖೆಗಳಿಂದ ಆಗುವ ತೊಂದರೆಗಳನ್ನು ಸರ್ಕಾರ ತೆಡೆಯುವ ಎಲ್ಲಾ ಪ್ರಯತ್ನಗಳು ಆಗಬೇಕು ಎಂದು ಒತ್ತಾಯಿಸಿದರು.
ಓದಿ:ರಾಜ್ಯದಲ್ಲಿಂದು 1,445 ಮಂದಿಗೆ ಸೋಂಕು ದೃಢ: ನಾಲ್ಕು ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಕಡ್ಡಾಯ
ಈ ಬಾರಿ ಸರ್ಕಾರ ನಮ್ಮ ಉದ್ಯಮಕ್ಕೆ ತೋಡಕಾಗುವಂತಹ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಬಾರದು. ನಮ್ಮ ಮಾಲೀಕರು, ಕಾರ್ಮಿಕರು ಹಾಗೂ ಗ್ರಾಹಕರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲಾ ರೀತಿಯ ಸುರಕ್ಷತಾ ಕ್ರಮ ಮನದಲ್ಲಿಟ್ಟುಕೊಂಡು ನಾವು ಸರ್ಕಾರದ ಸೂಚನೆಯಂತೆ ಕಾರ್ಯನಿರ್ವಹಿಸಲು ಬದ್ಧ ಎಂದರು.
ಆದರೆ, ನಮ್ಮ ವ್ಯವಹಾರಗಳಿಗೆ ತೊಂದರೆ ಕೊಡುವಂತಹ ಅಧಿಕಾರಿಗಳ ನಡೆ ಹಾಗೂ ಅನಗತ್ಯ ಕಾನೂನುಗಳನ್ನು ಸಂಪೂರ್ಣ ವಿರೋಧಿಸುತ್ತೇವೆ. ಸರ್ಕಾರ ಜಾಗರೂಕತೆಯಿಂದ ವ್ಯಾಪಾರಸ್ಥರ ಜೀವನ ಮತ್ತು ಜೀವನೋಪಾಯ ಎರಡನ್ನು ಹೊಂದಿಸಿಕೊಂಡು ಸರಿಹೋಗುವಂತಹ ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿಸಿದರು.