ಬೆಂಗಳೂರು : ಹಿಂದೂ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿಯಲಾಗಿದೆ.
ಹಿಂದೂ ವಿರೋಧಿ ಹೇಳಿಕೆ ಸಂಬಂಧ ವಕೀಲೆ ಮೀರಾ ರಾಘವೇಂದ್ರ ಎಂಬುವರು ಎರಡನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗಲು ಇಂದು ಭಗವಾನ್ಗೆ ಕೋರ್ಟ್ ಸೂಚನೆ ನೀಡಿತ್ತು. ಇದರಂತೆ ಮೈಸೂರಿನಿಂದ ಭಗವಾನ್ ಬಂದಿದ್ದರು. ವಿಚಾರಣೆ ಎದುರಿಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಕೋರ್ಟ್ನಿಂದ ನಿರ್ಗಮಿಸುತ್ತಿದ್ದಂತೆ ಆವರಣದಲ್ಲೇ ವಕೀಲೆ ಮೀರಾ ರಾಘವೇಂದ್ರ ಭಗವಾನ್ ಮುಖಕ್ಕೆ ಮಸಿ ಬಳಿ ಬಳಿದಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಮೈಸೂರಿನಲ್ಲಿ ಕೆ.ಎಸ್.ಭಗವಾನ್, ಹಿಂದೂ ಧರ್ಮ ಧರ್ಮವೇ ಅಲ್ಲ ಎಂದು ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಮೀರಾ ರಾಘವೇಂದ್ರ ದೂರು ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಜಾಮೀನು ಪಡೆದು ಹೊರ ಬರುತ್ತಿದ್ದಂತೆ ಮೀರಾ ರಾಘವೇಂದ್ರ ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ.
ಓದಿ: ಮುದ್ದಾದ ಮಗಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು!
ಇಷ್ಟು ವಯಸ್ಸಾಗಿದೆ ಸದಾ ದೇವರು ರಾಮನ ಬಗ್ಗೆ ಮಾತನಾಡುತ್ತಿರಲ್ಲ ನಾಚಿಕೆ ಆಗಲ್ವಾ ನಿಮಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಭಗವಾನ್ ಅವರು ವಕೀಲೆಯನ್ನು ಬಂಧಿಸುವಂತೆ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಮೀರಾ, ರಾಘವೇಂದ್ರ ನಾನು ಎಲ್ಲದಕ್ಕೂ ರೆಡಿ, ಜೈಲಿಗೆ ಹೋಗಲೂ ಸಿದ್ಧ ಎಂದೇಳಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಇನ್ನು ಭಗವಾನ್ ಅವರನ್ನು ಗನ್ ಮ್ಯಾನ್ ಹಾಗೂ ಪೊಲೀಸರು ಕೋರ್ಟ್ ಆವರಣದಿಂದ ಕರೆದೊಯ್ದಿದ್ದಾರೆ.
ವಕೀಲೆ ವಿರುದ್ಧ ಸಾಹಿತಿ ಕೆ.ಎಸ್.ಭಗವಾನ್ ದೂರು ದಾಖಲು:
ಇಂದು ಕೋರ್ಟ್ ಆವರಣದಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸಾಹಿತಿ ಕೆ.ಎಸ್.ಭಗವಾನ್ ಅವರು ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ವಕೀಲೆ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ ಹಲ್ಲೆ, ಜೀವ ಬೆದರಿಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನ್ಯಾಯಾಲಯದ ಆವರಣದಲ್ಲೇ ಹಲ್ಲೆ ನಡೆಸಿ, ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದ ಭಗವಾನ್ ಠಾಣೆಯಿಂದ ನಿರ್ಗಮಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಭಗವಾನ್ ಪರ ವಕೀಲ ಸೂರ್ಯ ಮಾತನಾಡಿ, ನ್ಯಾಯಾಲಯದ ಆವರಣದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಅದೂ ನ್ಯಾಯದ ಪರ ಕೆಲಸ ಮಾಡಬೇಕಾದವರೆ ಈ ರೀತಿ ಕೆಲಸದಲ್ಲಿ ಭಾಗಿಯಾಗಬಾರದಿತ್ತು. ನ್ಯಾಯಾಲಯದ ಪ್ರಕ್ರಿಯೆ ಮುಗಿಸಿ ಬರುತ್ತಿದ್ದ ಭಗವಾನ್ ಮೇಲೆ ಮೀರಾ ರಾಘವೇಂದ್ರ ಹಲ್ಲೆ ಮಾಡಿದ್ದಾರೆ. ಫೇಸ್ಬುಕ್ ಲೈವ್ ಬಂದು ಉದ್ರೇಕಕಾರಿಯಾಗಿ ಘೋಷಣೆಗಳನ್ನು ಕೂಗಿದ್ದಾರೆ. ಭಗವಾನ್ ಅವರ ವಯಸ್ಸಿಗಾದರೂ ಬೆಲೆ ಕೊಡಬೇಕಿತ್ತು. ವಕೀಲ ವೃತ್ತಿಗೆ ಅವಮಾನವಾಗುವಂತೆ ಮೀರಾ ರಾಘವೇಂದ್ರ ನಡೆದುಕೊಂಡಿದ್ದಾರೆ. ಹೀಗಾಗಿ ವಕೀಲ ವೃತ್ತಿಯಿಂದ ಮೀರಾ ರಾಘವೇಂದ್ರರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.