ಬೆಂಗಳೂರು: ಮಧ್ಯರಾತ್ರಿ ಸಹಾಯ ಮಾಡಲು ಬಂದ ವಕೀಲನನ್ನು ಅಪಹರಿಸಿ, ಹಣ ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ ಬನಶಂಕರಿ ಪೊಲೀಸರು ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಟಿಪ್ಪು ಸುಲ್ತಾನ್, ಜಾಫರ್, ವಿಶಾಲ್, ದೀಪಕ್,ನವೀನ್ ಬಂಧಿತ ಆರೋಪಿಗಳು. ಬಂಧಿತರ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ:
ಫೆ.13ರಂದು ರಾತ್ರಿ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ ವಕೀಲರು ಮನೆಗೆ ಹೋಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಆರೋಪಿಗಳು ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಗಾಯಾಳುಗಳ ನೆಪದಲ್ಲಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ವಕೀಲರು ಕಾರು ಹತ್ತಿಸಿಕೊಂಡಿದ್ದರು. ಈ ವೇಳೆ ಆರೋಪಿಗಳು ನಕಲಿ ಗನ್ ತೋರಿಸಿ ಅಪಹರಿಸಿ, ಅವರ ಮೇಲೆ ಹಲ್ಲೆ ಮಾಡಿ ಮಂಡ್ಯ ಜಿಲ್ಲೆಯ ಮಳ್ಳವಳ್ಳಿಗೆ ಕರೆದುಕೊಂಡು ಹೋಗಿದ್ದರು.
ಓದಿ: ಹೊಸಪೇಟೆ ಕೋರ್ಟ್ ಆವರಣದಲ್ಲೇ ಹರಿಯಿತು ನೆತ್ತರು: ವಕೀಲನ ಬರ್ಬರ ಹತ್ಯೆ
ಬಳಿಕ ಅಲ್ಲಿಂದ ವಕೀಲರ ಹೆಂಡತಿಗೆ ಫೋನ್ ಮಾಡಿ ನಿನ್ನ ಗಂಡನಿಗೆ ಅಪಘಾತವಾಗಿದೆ. ತುರ್ತು ಹಣ ಹಾಕುವಂತೆ ತಿಳಿಸಿದ್ದರು. ಇದನ್ನು ನಂಬಿ ವಕೀಲರ ಪತ್ನಿ 15 ಸಾವಿರ ಹಣವನ್ನು ಹಾಕಿದ್ದರು. ಹಣ ಕೈ ಸೇರುತ್ತಿದ್ದಂತೆ ಮೊಬೈಲ್ ಕಸಿದುಕೊಂಡು ಲಾಯರ್ ಅನ್ನು ಮಳ್ಳವಳ್ಳಿಯಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.
ನಂತರ ಅಲ್ಲಿಂದ ಬಂದ ವಕೀಲ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.