ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆ ಸಂಚಲನದ ನಂತದ ರೆಬೆಲ್ ನಾಯಕ ಎನಿಸಿಕೊಂಡಿದ್ದ ಶಾಸಕ ಉಮೇಶ್ ಕತ್ತಿ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಮಂಜಾನೆಯೇ ರೆಬೆಲ್ ಶಾಸಕ ಉಮೇಶ್ ಕತ್ತಿ ಭೇಟಿ ನೀಡಿದರು. ವಾಯು ವಿಹಾರದಲ್ಲಿ ನಿರತರಾಗಿದ್ದ ಯಡಿಯೂರಪ್ಪ ಜೊತೆಯಲ್ಲಿ 20 ನಿಮಿಷ ವಾಕಿಂಗ್ ಮಾಡಿದರು.
ವಾಯು ವಿಹಾರ ನಡೆಸುತ್ತಲೇ ಇತ್ತೀಚಿನ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದರು. ಶಾಸಕರ ಸಭೆ ನಡೆಸಲಾಗಿದೆ ಎನ್ನುವ ಮಾಧ್ಯಮ ವರದಿಗಳ ಕುರಿತು ಪ್ರಸ್ತಾಪ ಮಾಡಿ ರೆಬೆಲ್ ಚಟುವಟಿಕೆ ನಡೆಸಿಲ್ಲ ಎನ್ನುವ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ಗುರುವಾರ ಶಾಸಕರ ಸಭೆ ನಡೆದಿತ್ತು. ಆ ನಂತರ ಸಿಎಂ ಭೇಟಿ ಮಾಡದೇ ಇದ್ದ ಕತ್ತಿ ರೆಬೆಲ್ ಚಟುವಟಿಕೆ ನಂತರ ಮೊದಲ ಬಾರಿಗೆ ಸಿಎಂ ಭೇಟಿ ಮಾಡಿ ಘಟನೆಗಳ ಬಗ್ಗೆ ವಿವರಣೆ ನೀಡುವ ಜೊತೆಗೆ ಸಹೋದರನಿಗೆ ರಾಜ್ಯಸಭೆ ಟಿಕೆಟ್ ನೀಡುವಂತೆ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಸಿಎಂ ಜೊತೆ ಇದ್ದ ಮುನಿಸನ್ನು ಬದಿಗೊತ್ತಿ ಸಹೋದರನ ಪರ ರಾಜ್ಯಸಭೆ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದು, ಸಿಎಂ ಬಿಎಸ್ವೈ ಮೇಲೆ ಒತ್ತಡ ಹಾಕುತ್ತಿದ್ದಾರೆ.