ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು 14 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 862ಕ್ಕೆ ಏರಿಕೆಯಾಗಿದೆ.
ಈ ಸೋಂಕಿತರ ಪೈಕಿ 31 ಮಂದಿ ಸೋಂಕಿತರು ಮರಣ ಹೊಂದಿದ್ದು, 426 ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.
ಇಂದಿನ ವರದಿಯ ಪ್ರಕಾರ ಬೆಂಗಳೂರು, ಕಲಬುರಗಿ, ಮಂಡ್ಯ, ಹಾವೇರಿ, ವಿಜಯಪುರದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಇದರ ಜೊತೆಗೆ ಆಂಧ್ರಪ್ರದೇಶ ಮೂಲದ ಓರ್ವನಲ್ಲಿ ಸೋಂಕು ಕಂಡುಬಂದಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಗಲಕೋಟೆಯಲ್ಲಿ 2, ಬೀದರ್ನಲ್ಲಿ 2, ದಾವಣಗೆರೆಯಲ್ಲಿ ಮೂವರಿಗೆ ಸೋಂಕು ತಗುಲಿದೆ. ಹಾಸನ ಮೂಲದ ಯುವತಿಯಲ್ಲಿ ಮೊದಲ ಬಾರಿಗೆ ಸೋಂಕು ಕಂಡುಬಂದಿದ್ದು, ಆಕೆಗೆ ಮಂಡ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.