ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆ ಪಡೆಯಲು ಮನೆಯೊಡತಿಯ ಮಗನ ತೆರಿಗೆ ಪಾವತಿ ಮಾಡುವುದನ್ನು ಪರಿಗಣಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಮಗ ತೆರಿಗೆ ಪಾವತಿ ಮಾಡಿದರೆ ಗೃಹಲಕ್ಷ್ಮಿ ಯೋಜನೆ ಸಿಗುವುದಿಲ್ಲ ಎಂದು ಸಚಿವೆ ನಿನ್ನೆ ಗೊಂದಲದ ಹೇಳಿಕೆ ನೀಡಿದ್ದರು. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಅವರು, ಮಗ ತೆರಿಗೆ ಪಾವತಿ ಮಾಡುವುದನ್ನು ಪರಿಗಣಿಸುವುದಿಲ್ಲ. ಗಂಡ ತೆರಿಗೆ ಪಾವತಿಸಿದರೆ ಪತ್ನಿಗೆ ಯೋಜನೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಅರ್ಜಿ ನಮೂನೆ ಅಸಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ನಮೂನೆ ಅಸಲಿ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಗೃಹಲಕ್ಷ್ಮಿ ಅರ್ಜಿ ನಮೂನೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಿದ್ದೇವೆ. ಬ್ಯಾಂಕ್ ಪಾಸ್ ಬುಕ್ ಸೇರಿಸಲಾಗುವುದು. ಜಾತಿ ಬದಲು ವರ್ಗ ಅಂತ ಹಾಕುತ್ತೇವೆ. ಸಂದೇಶ ತಪ್ಪಾಗಿ ಹೋಗಬಾರದು. 90% ಬಿಪಿಎಲ್ ಕಾರ್ಡ್ನಲ್ಲಿ ಮಹಿಳೆಯರೇ ಪ್ರಮುಖ ಅಗಲಿದ್ದಾರೆ. ಯಾರಿಗೆಲ್ಲಾ ಫಲ ಸಿಗಬೇಕು ಅವರನ್ನ ಸೇರಿಸಲಾಗುತ್ತೆ. ಈಗ ಬಂದಿರೋ ಅರ್ಜಿ ಡ್ರಾಫ್ಟ್ ಮಾತ್ರ. ಯೋಜನೆ ಚಾಲನೆ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯಲಿದೆ. ಆಗಸ್ಟ್ 17 ಅಥವಾ 18ರಂದು ನಡೆಯಲಿದೆ ಎಂದರು.
ಸಚಿವೆಯ ಸಹೋದರ ಗರಂ: ಸಚಿವೆಯ ವಿಧಾನಸೌಧ ಕಚೇರಿಯಲ್ಲಿ ಸಹೋದರ ಚನ್ನರಾಜ್ ಹಟ್ಟಿಹೊಳಿ ಗರಂ ಆದ ಘಟನೆ ನಡೆದಿದೆ. ಗ್ಯಾರಂಟಿ ಸ್ಕೀಂ ಅನುಮಾನಗಳ ಬಗ್ಗೆ ಪ್ರಶ್ನೆ ಮಾಡಲು ತೆರಳಿದ್ದ ಮಾಧ್ಯಮಗಳಿಗೆ ಹೊರಗೆ ನಡೆಯಿರಿ ಏನೂ ಉತ್ತರ ಕೊಡಲ್ಲ ಎಂದರು. ಮಾಧ್ಯಮದವರು ಆಕ್ಷೇಪ ವ್ಯಕ್ತಪಡಿಸಿದಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನ ಪರವಾಗಿ ಮಾಧ್ಯಮದವರಿಗೆ ಕ್ಷಮೆ ಕೇಳಿದರು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂ 15 ರಿಂದ ಪ್ರಾರಂಭ: ನಿನ್ನೆ ಗೃಹ ಜ್ಯೋತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ ಚರ್ಚಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಗೃಹಲಕ್ಷ್ಮಿಯ ಯೋಜನೆಯ ಲಾಭ ಪಡೆಯಲು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ತೆರಿಗೆ ಪಾವತಿಸುವವರು ಹಾಗೂ ಜಿಎಸ್ಟಿ ನೋಂದಣಿ ಮಾಡಿಕೊಂಡಿರುವವರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದರು.
ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 15 ರಿಂದ ಪ್ರಾರಂಭವಾಗಲಿದೆ. ಆನ್‌ಲೈನ್ ನಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅಂತೆಯೇ ನಾಡಕಚೇರಿಗಳಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಪ್ರತ್ಯೇಕ ಕೌಂಟರುಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಅರ್ಜಿದಾರರು ರೇಷನ್ ಕಾರ್ಡ್ ಸಂಖ್ಯೆ, ಯಜಮಾನಿಯ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಆಧಾರ್ ಸಂಯೋಜನೆಯಾಗಿರುವ ಬ್ಯಾಂಕ್ ಖಾತೆಯ ವಿವರ ಒದಗಿಸಬೇಕು. ಈ ದಾಖಲೆಗಳ ಪ್ರತಿಗಳನ್ನು ಆಫ್‌ಲೈನ್ ಅರ್ಜಿಗಳೊಂದಿಗೂ ಸಲ್ಲಿಸಬಹುದು.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ : ವಿಧಿಸುವ ಷರತ್ತುಗಳು ಏನು ಗೊತ್ತಾ?