ಬೆಂಗಳೂರು: ಕೋವಿಡ್ ಎರಡನೇ ಅಲೆ ತಡೆಗೆ ರಾಜ್ಯದಲ್ಲಿ ಜನತಾ ಕರ್ಫ್ಯೂ ತಂದು ಇದೀಗ ಲಾಕ್ಡೌನ್ ವಿಧಿಸಲಾಗಿದೆ. ರಸ್ತೆ ಕಾಮಗಾರಿಗೆ ಅವಕಾಶ ನೀಡಲಾಗಿದ್ದರೂ ಕೂಡ ಕಾಮಗಾರಿಗೆ ಕಾರ್ಮಿಕತರ ಕೊರತೆ ಕಾಡುತ್ತಿದೆ. ಕೋವಿಡ್ ಮತ್ತು ಲಾಕ್ಡೌನ್ ಭೀತಿಯಿಂದ ಊರಿಗೆ ಮರಳಿದವರು ಅದೆಷ್ಟೋ ಮಂದಿ. ಪರಿಣಾಮ ಕಾರ್ಮಿಕರ ಕೊರತೆ ಎದುರಾಗಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿದ್ದರೆ, ಹಲವೆಡೆ ಕಾಮಗಾರಿಗಳು ಸ್ಥಗಿತಗೊಂಡಿವೆ.
ಪಂಚ ರಾಜ್ಯ ಚುನಾವಣೆ ಹಿನ್ನೆಲೆ ಮತ ಚಲಾವಣೆಗೆ ಕಾರ್ಮಿಕರು ಊರಿಗೆ ಹೋಗಿದ್ದು, ಇನ್ನೂ ಬಂದಿಲ್ಲ. ಬಹುತೇಕರು ಉತ್ತರ ಭಾರತ ಹಾಗೂ ಪಶ್ಚಿಮ ಬಂಗಾಳದ ಕಾರ್ಮಿಕರು ರಸ್ತೆ ಕಾಮಗಾರಿ ಹಾಗೂ ಇನ್ನಿತರೆ ಕಟ್ಟಡ ನಿರ್ಮಾಣ ಕೆಲಸ ಮಾಡುವವರಾಗಿದ್ದು, ಇನ್ನೂ ಕೆಲಸಕ್ಕೆ ಹಿಂತಿರುಗಿಲ್ಲ ಎಂದು ಗುತ್ತಿಗೆ ಪಡೆದವರು ಮಾಹಿತಿ ನೀಡಿದ್ದಾರೆ. ಕೋವಿಡ್ ನಿಯಮಗಳು, ಲಾಕ್ಡೌನ್, ಕರ್ಫ್ಯೂನಿಂದ ಕಾರ್ಮಿಕರು ಹಿಂದಿರುಗಲು ಸಾಧ್ಯವಾಗಿಲ್ಲ.
ಸದ್ಯ ನಗರದಲ್ಲಿ ರಸ್ತೆ ಕಾಮಗಾರಿ ಸೇರಿದಂತೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅವಕಾಶವಿದೆ. ಆದರೆ ಬೇರೆ ಕಾಮಗಾರಿಗಳಿಗೆ ನಿರ್ಬಂಧ ಹೇರಲಾಗಿದೆ. ಇದರಿಂದ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಪರಿಣಾಮ ಕಾಮಗಾರಿಯ ಕೊನೆ ದಿನಾಂಕ ಕೂಡ ಮುಂದೂಡುವ ಸಾಧ್ಯತೆಗಳು ಇವೆ ಎಂದು ಗುತ್ತಿಗೆ ಪಡೆದವರೋರ್ವರು ತಿಳಿಸಿದ್ದಾರೆ.
ಬೆಲೆ ಏರಿಕೆ ಬಿಸಿ ಕಾಮಗಾರಿಯ ವೆಚ್ಚ ಹೆಚ್ಚು ಮಾಡಲಿದೆ. ದೇಶದಲ್ಲಿ ಕಚ್ಛಾ ವಸ್ತುಗಳ ಬೆಲೆ ಕೂಡ ಏರುತ್ತಲೇ ಇದೆ. ಸಿಮೆಂಟ್, ಕಬ್ಬಿಣ ಹಾಗೂ ಇನ್ನಿತರೆ ಕಾಮಗಾರಿಗೆ ಬೇಕಾಗುವ ಅಗತ್ಯ ವಸ್ತುಗಳ ಬೆಲೆ ಕಳೆದ 6 ತಿಂಗಳಲ್ಲಿ ಏರಿಕೆ ಕಂಡಿದೆ. ಹಾಗೂ ಬೇಕಾದ ಸಂದರ್ಭದಲ್ಲಿ ಕಾಮಗಾರಿಗೆ ಬೇಕಾದ ಬಿಡಿ ವಸ್ತುಗಳ ಖರೀದಿಗೂ ಈಗ ಅವಕಾಶವಿಲ್ಲ. ಎಲ್ಲಾ ಅಂಗಡಿ ಮುಂಗಟ್ಟು ಮುಚ್ಚಲಾಗಿದೆ. ಇದರಿಂದ ಒಪ್ಪಿದ ಬೆಲೆಯಲ್ಲಿ ಹಾಗೂ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾರ್ಮಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಈಗಿರುವ ಲಾಕ್ಡೌನ್ ನಿಯಮ ಒಪ್ಪುವುದಿಲ್ಲ. ಸ್ಥಳೀಯ ಪೊಲೀಸರು ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಹೀಗಾಗಿ ಕೆಲ ಕಡೆಗಳಲ್ಲಿ ಕಾಮಗಾರಿ ನಿಂತಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಸೋಂಕಿತರು ಹೆಚ್ಚಾದಂತೆ ಆಂಬ್ಯುಲೆನ್ಸ್ ಸೇವೆಯ ಮೇಲೂ ತೀವ್ರ ಒತ್ತಡ
ಒಟ್ಟಾರೆ ಲಾಕ್ಡೌನ್ ಬಿಸಿ ಸರ್ಕಾರದ ಮೂಲಭೂತ ಸೌಕರ್ಯದ ಕಾಮಗಾರಿಗಳಿಗೂ ತಟ್ಟಿದೆ. ಕಾಮಗಾರಿ ಪೂರ್ಣ ಆಗುವ ಸಂದರ್ಭದಲ್ಲಿ ಬೆಲೆ ಮತ್ತೆ ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ. ಇದರ ಜತೆಗೆ ಕಾಮಗಾರಿ ಪೂರ್ಣ ದಿನಾಂಕ ಅಷ್ಟರಲ್ಲಿ ಗುತ್ತಿಗೆ ಪಡೆದ ಕೆಲಸ ಮುಗಿಸಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಯಿದೆ.