ಬೆಂಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕೊರತೆ ಇದ್ದು, ತುರ್ತಾಗಿ ವೃದ್ಧಿಪಡಿಸಬೇಕಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ವರದಿಗೆ ಪ್ರತಿಕ್ರಿಯಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಿದೆ.
ಕೋವಿಡ್ ನಿರ್ವಹಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲರು ಪೀಠಕ್ಕೆ ಲಿಖಿತ ಮಾಹಿತಿ ನೀಡಿ, ಕಟ್ಟಡ ಕಾರ್ಮಿಕರ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿದೆ.
ಕೂಡಲೇ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು. ಇಲ್ಲವಾದರೆ ಕೋವಿಡ್ ಅಷ್ಟೇ ಅಲ್ಲ ಇತರೆ ರೋಗಗಳಿಗೂ ಮಕ್ಕಳು ತುತ್ತಾಗುವ ಅಪಾಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ವಿವರಿಸಿದರು. ಹೇಳಿಕೆ ಪರಿಗಣಿಸಿದ ಪೀಠ, ಕಟ್ಟಡ ಕಾರ್ಮಿಕರ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಿಚಾರವಾಗಿ ಸರ್ಕಾರ ಮತ್ತು ಬಿಬಿಎಂಪಿ ಪ್ರತಿಕ್ರಿಯಿಸಬೇಕು ಎಂದು ನಿರ್ದೇಶಿಸಿತು.
2ನೇ ಡೋಸ್ಗೆ ದಿಢೀರ್ ಬೇಡಿಕೆ:
ಪ್ರಕರಣದ ಅಮೈಕಸ್ ಕ್ಯೂರಿ ವಿಕ್ರಂ ಹುಯಿಲ್ಗೋಳ ಅವರು ಮಾಹಿತಿ ನೀಡಿ, ರಾಜ್ಯದಲ್ಲಿ ಒಟ್ಟು 1.6 ಲಕ್ಷ ಜನ ಲಸಿಕೆಯ 2ನೇ ಡೋಸ್ ಪಡೆದುಕೊಳ್ಳಬೇಕಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಮೊದಲನೇ ಲಸಿಕೆ ತೆಗೆದುಕೊಂಡಿರುವವರು 2ನೇ ಡೋಸ್ ತೆಗೆದುಕೊಳ್ಳಬೇಕಿದೆ. ಇದರಿಂದ ಆಗಸ್ಟ್‌ನಲ್ಲಿ 2ನೇ ಡೋಸ್ಗೆ ದಿಢೀರನೇ ಹೆಚ್ಚಿನ ಬೇಡಿಕೆ ಉಂಟಾಗಬಹುದು ಎಂದು ತಿಳಿಸಿದರು.
ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರು ಮಾಹಿತಿ ನೀಡಿ, ಜುಲೈ ಕೋಟಾದಡಿ 49,77,830 ಕೋವಿಶೀಲ್ಡ್ ಮತ್ತು 1,20,620 ಕೋವ್ಯಾಕ್ಸಿನ್ ಡೋಸ್‌ಗಳು ಮಂಜೂರಾಗಿವೆ. ರಾಜ್ಯದಲ್ಲಿ ಸದ್ಯ 6.72 ಲಕ್ಷ ಕೋವಿಶೀಲ್ಡ್ ಮತ್ತು 2.3 ಲಕ್ಷ ಕೋವ್ಯಾಕ್ಸಿನ್ ಡೋಸ್ ಲಭ್ಯವಿದೆ. ಇದರಿಂದ ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ ಎಂದು ವಿವರಿಸಿದರು.
ವಾದ ಆಲಿಸಿದ ಪೀಠ, ಜುಲೈ ಮತ್ತು ಆಗಸ್ಟ್ ತಿಂಗಳಿಗೆ ಎಷ್ಟು ಡೋಸ್ಗಳ ಅಗತ್ಯವಿದೆ ಎಂಬ ಬಗ್ಗೆ ಪರಿಶೀಲಿಸಿ ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಕೂಡಲೇ ಮನವಿ ಸಲ್ಲಿಸಬೇಕು. ಹಾಗೆಯೇ, ಮೂಂಚೂಣಿ ಕಾರ್ಯಕರ್ತರ ಕುಟುಂಬಗಳ ಸದಸ್ಯರಿಗೂ ಆದ್ಯತೆ ಮೇರೆಗೆ ಲಸಿಕೆ ನೀಡುವ ಕುರಿತಂತೆ ಸರ್ಕಾರ ವರದಿ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿತು.
ಓದಿ: ಸರ್ಕಾರಿ ಅಭಿಯೋಜಕರ ಕೊರತೆ ಆರೋಪಿಗಳ ಹಕ್ಕು ಉಲ್ಲಂಘಿಸುತ್ತದೆ: ಹೈಕೋರ್ಟ್