ಬೆಂಗಳೂರು: ಕೋವಿಡ್ ಮಹಾಮಾರಿಯಿಂದ ನಗರದಲ್ಲಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಚಿತಾಗಾರಗಳ ಸ್ಥಿತಿ ಬಿಗಡಾಯಿಸುತ್ತಿದೆ.
ಮೇಡಿ ಅಗ್ರಹಾರದ ಅಗ್ನಿ ಚಿತಾಗಾರದಲ್ಲಿ ಇಂದು ಮುಂಜಾನೆಯಿಂದಲೂ ಶವಗಳಿರುವ ಆ್ಯಂಬುಲೆನ್ಸ್ಗಳು ಸಾಲುಗಟ್ಟಿ ನಿಂತಿವೆ. ಬೆಳಗ್ಗೆ ಏಳರಿಂದ ರಾತ್ರಿ ಹನ್ನೆರೆಡಾದರೂ ಶವಗಳು ಮುಗಿಯುತ್ತಿಲ್ಲ. ಒಂದೊಂದು ಹೆಣ ಸುಡಲೂ ಒಂದರಿಂದ ಒಂದೂವರೆ ಗಂಟೆ ಸಮಯ ಹಿಡಿಯುತ್ತಿದೆ.
ಆದರೆ, ಸ್ಮಶಾನದಲ್ಲಿ ಕೆಲಸ ಮಾಡುವ ನೌಕರರಿಗೆ ಸರಿಯಾದ ಸವಲತ್ತುಗಳಿಲ್ಲ. ಸರಿಯಾದ ಪ್ರಮಾಣದಲ್ಲಿ ಮಾಸ್ಕ್, ಕೈಗವಸು, ಪಿಪಿಇ ಕಿಟ್, ಸ್ಯಾನಿಟೈಸರ್ ಕೂಡಾ ಕೊಟ್ಟಿಲ್ಲ. ಇದರಿಂದ ಸಾರ್ವಜನಿಕರ ಆರೋಗ್ಯಕ್ಕೂ ಕುತ್ತು ಬರುವ ಆತಂಕ ಇದೆ ಎಂದು ನೌಕರರೊಬ್ಬರು ತಿಳಿಸಿದರು.
ಕೋವಿಡ್ ಸೋಂಕಿತರ ಮೃತದೇಹ ಸುಡುವುದಕ್ಕೆಂದೇ ಮೇಡಿ ಅಗ್ರಹಾರ, ಸುಮನಹಳ್ಳಿ, ಬೊಮ್ಮಹಳ್ಳಿ, ಕೆಂಗೇರಿ, ಪೆನತ್ತೂರುಗಳಲ್ಲಿ 5 ಚಿತಾಗಾರಗಳನ್ನು ಮೀಸಲಿಡಲಾಗಿದೆ. ಆದ್ರೆ ಪೆನತ್ತೂರು, ಕೆಂಗೇರಿಗಳಲ್ಲಿ ಈಗಾಗಲೇ ಒಂದು ಯಂತ್ರ ಕೆಟ್ಟಿದೆ ಎಂದು ನೌಕರರಾದ ರಾಜಾ ತಿಳಿಸಿದರು.