ಬೆಂಗಳೂರು: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಸಾಕಷ್ಟು ಆರೋಪಗಳಿದ್ದು ಅವುಗಳನ್ನು ಸರ್ಕಾರವು ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು. ಶನಿವಾರ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಯಾರೇ ಆಗಲಿ ಹಸಿರು ಶಾಲು, ರೈತ ಚಳುವಳಿಯ ಮುಖವಾಡ ಧರಿಸಿ ರೈತರಿಗೆ ದ್ರೋಹ ಬಗೆಯುವ ಕಾರ್ಯ ನಡೆಸುವುದು ಹೆತ್ತ ತಾಯಿಗೆ ದ್ರೋಹ ಬಗೆದಂತೆ ಎಂದರು.
ಬ್ಯಾಂಕುಗಳಲ್ಲಿ ಕೃಷಿ ಸಾಲ ಪಡೆಯಲು ರೈತರ ಸಿಬಿಲ್ ಸ್ಕೋರ್ ಪರಿಗಣಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ, ಬರಗಾಲಕ್ಕೆ ತುತ್ತಾದಾಗ ಸಕಾಲಕ್ಕೆ ಸಾಲ ಮರು ಪಾವತಿಸಲು ಸಾಧ್ಯವಾಗುವುದಿಲ್ಲ. ಕೂಡಲೇ ನಿಯಮವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ರಾಜ್ಯದ ರೈತರು ರಿಸರ್ವ್ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರ ಕೃಷಿಭೂಮಿ ಸ್ವಯಂ ಭೂಪರಿವರ್ತನೆ ಕಾಯ್ದೆ ಜಾರಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದವರು ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಕಾಯ್ದೆ ರದ್ದುಪಡಿಸಬೇಕು. ಕಂದಾಯ ಸಚಿವರು ರೈತ ಮುಖಂಡರ ಜೊತೆ ಕಾಯ್ದೆ ಸಂಬಂಧ ಸಾಧಕ ಬಾಧಕಗಳ ಕುರಿತು ಚರ್ಚಿಸಬೇಕು. ಕೋಡಿಹಳ್ಳಿ ಚಂದ್ರಶೇಖರ್ ಸ್ಟಿಂಗ್ ಆಪರೇಷನ್ ಬಗ್ಗೆ ಸಮಗ್ರ ತನಿಖೆಯಾಗಲಿ. ಆಗ ಸತ್ಯಾಸತ್ಯತೆ ಜನತೆಗೆ ತಿಳಿಯುತ್ತದೆ ಎಂದು ಕುರುಬೂರು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಬಣ - ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ